ನವದೆಹಲಿ: ಬರುವ ಜುಲೈ 1ರಿಂದ ಹಣ ವಿತ್‌ಡ್ರಾ ಹಾಗೂ ಚೆಕ್‌ಬುಕ್ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರಿ ಬದಲಾವಣೆ ಮಾಡಿದ್ದು, ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಇದು ಎಸ್‌ಬಿಐನ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ ಅಕೌಂಟ್ (ಬಿಎಸ್‌ಬಿಡಿ) ಖಾತೆದಾರರಿಗೆ ಅನ್ವಯ ಆಗಲಿದೆ.
ಏನೇನು ಬದಲಾವಣೆಗಳು?
ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ ಜುಲೈ 1ರಿಂದ ಎಟಿಎಂ ಅಥವಾ ಬ್ಯಾಂಕ್‌ನಲ್ಲಿ ತಿಂಗಳಿಗೆ ನಾಲ್ಕು ಸಲ ಮಾತ್ರ ಉಚಿತವಾಗಿ ಹಣವನ್ನು ಪಡೆದುಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಬಾರಿ ಹಣವನ್ನು ಪಡೆದುಕೊಂಡರೆ ಸೇವಾ ಶುಲ್ಕ ನೀಡಬೇಕಾಗುತ್ತದೆ. ಈ ಶುಲ್ಕವು ಹೆಚ್ಚುವರಿ 15 ರೂಪಾಯಿ ಪ್ಲಸ್ ಜಿಎಸ್‌ಟಿಯನ್ನು ಸೇರಿರುತ್ತದೆ. ನೀವು ಎಟಿಎಂ ಅಥವಾ ಬ್ಯಾಂಕ್ ಎಲ್ಲಿಯೇ ಹಣವನ್ನು ವಿತ್‌ಡ್ರಾ ಮಾಡಿಕೊಂಡರೂ ಅಷ್ಟೇ. ನಾಲ್ಕು ಬಾರಿ ಮಾತ್ರ ಉಚಿತವಾಗಿ ನಿಮ್ಮ ಖಾತೆಯಿಂದ ಹಣವನ್ನು ಪಡೆದುಕೊಳ್ಳಬಹುದು. ಇಲ್ಲದಿದ್ದರೆ ಹೆಚ್ಚುವರಿ ಶುಲ್ಕ ನೀಡಬೇಕು. ಎಸ್‌ಬಿಐನ ಎಟಿಎಂ ಇಲ್ಲವೇ ಬೇರೆ ಯಾವುದೇ ಬ್ಯಾಂಕ್‌ನ ಎಟಿಎಂನಲ್ಲಿ ಹಣ ಪಡೆದರೂ ಇದೇ ನಿಯಮ ಅನ್ವಯ ಆಗಲಿದೆ ಎಂದು ಬ್ಯಾಂಕ್ ಹೇಳಿದೆ.
ಅದೇ ರೀತಿ ಚೆಕ್‌ಬುಕ್ ಪಡೆಯುವಿಕೆಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಅದೇನೆಂದರೆ 10 ಚೆಕ್‌ಲೀಫ್ ಹೊಂದಿರುವ ಚೆಕ್‌ಪುಸ್ತಕವನ್ನು ಮೊದಲಿಗೆ ಉಚಿತವಾಗಿ ನೀಡಲಾಗುತ್ತದೆ. ಅದು ಮುಗಿದುಹೋದರೆ ಚೆಕ್‌ಬುಕ್ ಪಡೆದುಕೊಳ್ಳಲು ಹಣವನ್ನು ಪಾವತಿಸಬೇಕು ಇನ್ನುಮುಂದೆ. ಹೆಚ್ಚುವರಿ 10 ಚೆಕ್‌ಲೀವ್ಸ್ ಪುಸ್ತಕ ಖರೀದಿಗೆ 40 ರೂಪಾಯಿ, 25 ಚೆಕ್‌ಲೀವ್ಸ್ ಇದ್ದರೆ ಅದಕ್ಕೆ 75 ರೂಪಾಯಿ ಪಾವತಿಸಬೇಕಿದೆ. ಈ ಹಣದ ಜತೆಗೆ ಜಿಎಸ್‌ಟಿ ಶುಲ್ಕವೂ ಸೇರಿರಲಿದೆ. ತುರ್ತಾಗಿ ಚೆಕ್‌ಲೀವ್ಸ್ ಬೇಕಿದ್ದರೆ 10 ಲೀವ್ಸ್‌ಗೆ 50 ರೂಪಾಯಿ ಪ್ಲಸ್ ಜಿಎಸ್‌ಟಿ ನೀಡಬೇಕು. ಚೆಕ್‌ಬುಕ್‌ಗೆ ಸಂಬಂಧಿಸಿದಂತೆ ಹೊಸ ನಿಯಮಗಳಿಂದ ಹಿರಿಯ ನಾಗರಿಕರಿಗೆ ವಿನಾಯಿತಿ ನೀಡಲಾಗಿದೆ.
ಇದರ ಜತೆಗೆ ಇನ್ನೂ ಒಂದು ದೊಡ್ಡ ಬದಲಾವಣೆ ಎಂದರೆ, ಸ್ವಯಂ (ಚೆಕ್ ಬಳಸಿ) ನಗದು ಹಿಂಪಡೆಯುವಿಕೆಯನ್ನು ದಿನಕ್ಕೆ ಒಂದು ಲಕ್ಷ ರೂಪಾಯಿಗೆ ಏರಿಸಲಾಗಿದೆ. ಉಳಿತಾಯ ಬ್ಯಾಂಕ್ ಪಾಸ್‌ಬುಕ್ ಜತೆಗೆ ವಾಪಸಾತಿ ಫಾರ್ಮ್ ಬಳಸಿ ನಗದು ಹಿಂಪಡೆಯುವುದಿದ್ದರೆ ಅದರ ಮಿತಿಯನ್ನು 25 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ಥರ್ಡ್ ಪಾರ್ಟಿ ಹಣ ಹಿಂಪಡೆಯುವಿಕೆಯನ್ನು 50 ಸಾವಿರ ರೂ.ಗೆ ಮಿತಿಗೊಳಿಸಲಾಗಿದೆ .