ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆ ವೇಳೆ ದೇಶಾದ್ಯಂತ ಸುಮಾರು 800 ಮಂದಿ ವೈದ್ಯರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದು, ಈ ಪೈಕಿ ದೆಹಲಿಯಲ್ಲಿ ಗರಿಷ್ಠ ಅಂದರೆ 128 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಾಹಿತಿ ನೀಡಿದೆ.
ದೇಶಾದ್ಯಂತ 2ನೇ ಅಲೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ವೈದ್ಯರ ಕುರಿತ ದತ್ತಾಂಶಗಳನ್ನು ಏಮ್ಸ್ ನೀಡಿದ್ದು, ದೇಶಾದ್ಯಂತ 800ಮಂದಿ ವೈದ್ಯರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಈ ಪೈಕಿ ರಾಷ್ಟ್ರ ರಾಜಧಾನಿ ದೆಹಲಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇಲ್ಲಿ 128 ಮಂದಿ ವೈದ್ಯರು ಸಾವನ್ನಪ್ಪಿದ್ದು, ನಂತರದ ಸ್ಥಾನದಲ್ಲಿರುವ ಬಿಹಾರದಲ್ಲಿ 115 ವೈದ್ಯರು ಸಾವನ್ನಪ್ಪಿದ್ದಾರೆ.
ಉಳಿದಂತೆ ಉತ್ತರ ಪ್ರದೇಶದಲ್ಲಿ 79 ಮಂದಿ ವೈದ್ಯರು ಸಾವನ್ನಪ್ಪಿದ್ದು, ಮಹಾರಾಷ್ಟ್ರದಲ್ಲಿ 23 ಮತ್ತು ಕೇರಳದಲ್ಲಿ 24 ಮಂದಿ, ಕರ್ನಾಟಕದಲ್ಲಿ 9 ಮಂದಿ ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ. ಕನಿಷ್ಠ ಪ್ರಮಾಣ ಪುದುಚೇರಿಯಲ್ಲಿ ದಾಖಲಾಗಿದ್ದು, ಇಲ್ಲಿ ಓರ್ವ ವೈದ್ಯರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ,
ಕಳೆದ ಮೊದಲ ಅಲೆಯಲ್ಲಿ ದೇಶದಲ್ಲಿ 748 ವೈದ್ಯರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಪ್ರಸ್ತುತ ಐಎಂಎ ಬಳಿ 3.5 ಲಕ್ಷ ಕಾರ್ಯನಿರತ ವೈದ್ಯ ಸದಸ್ಯರ ದತ್ತಾಂಶವಿದ್ದು, ಇಂದು ದೇಶಾದ್ಯಂತ 12ಲಕ್ಷಕ್ಕೂ ಅಧಿಕ ವೈದ್ಯರು ಕೋವಿಡ್ ಸಾಂಕ್ರಾಮಿಕದ ವೇಳೆ ಸೇವೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.