ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿಯ 10 ಎಕ್ರೆ ಜಾಗದಲ್ಲಿ ವಿಸ್ತೃತವಾಗಿರುವ ಅನೋಡಿ ಪಳ್ಳ ಪ್ರದೇಶದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಮರವಾಗಿ ಬೆಳೆಯಬಲ್ಲ 200 ಸಸಿಗಳನ್ನು ನೆಡಲಾಗಿದೆ.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಪ್ರವಾಸೋದ್ಯಮ ಭೂಪಟದಲ್ಲಿ ಅನೋಡಿ ಪ್ರದೇಶ ಈ ಯೋಜನೆ ಮೂಲಕ ಸ್ಥಾನಪಡೆಯಲಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಮಾತನಾಡಿ ಕಾಸರಗೋಡು ಮತ್ತು ಮಂಜೇಶ್ವರ ಬ್ಲೋಕ್ ಗಳಲ್ಲಿ ಭೂಗರ್ಭ ಜಲ ಲಭ್ಯತೆ ಕುಂಠಿತಗೊಂಡಿದ್ದು, ಶೇ 97.8 ಜಲಾಂಶ ನಷ್ಟವಾಗಿರುವ ಗಣನೆ ಲಭಿಸಿದೆ. ಕಳೆದೆರಡು ವರ್ಷಗಳಿಂದ ನಡೆಸಲಾದ ಕಠಿಣ ಯತ್ನಗಳ ಫಲವಾಗಿ ಇದು ಸೇ 95 ಆಗಿದೆ. ಅನೋಡಿ ಪಳ್ಳದ ಅಭಿವೃದ್ಧಿ ನಡೆಸಿ ಪ್ರವಾಸಿ ಕೇಂದ್ರವಾಗಿಸುವುದು ಅನೇಕ ಸಾಧ್ಯತೆಗಳಿಗೆ ಕದ ತೆರೆದಿದೆ ಎಂದವರು ತಿಳಿಸಿದರು.
ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಎಚ್.ಎ.ಎಲ್. ಡೆಪ್ಯೂಟಿ ಜನರಲ್ ಮೇನೇಜರ್ ಎ.ಎಸ್.ಸಜಿ, ವಾರ್ಡ್ ಸದಸ್ಯೆ ಜಯಂತಿ, ಹಣಕಾಸು ಅಧಿಕಾರಿ ಕೆ.ಸತೀಶನ್, ಜಿಲ್ಲಾ ನಿರ್ಮಿತಿ ಕೇಂದ್ರ ಕಾರ್ಯಕಾರಿ ಕಾರ್ಯದರ್ಶಿ ಸುಂದರೇಶನ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ.ಅಶೋಕ್ ಕುಮಾರ್ ಸ್ವಾಗತಿಸಿ, ಕೆ.ಬಾಲಕೃಷ್ಣ ಆಚಾರ್ಯ ವಂದಿಸಿದರು.