ನವದೆಹಲಿ: ದೇಶದಲ್ಲಿ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ನೆರವಾಗಲು ಅಝಿಮ್ ಪ್ರೇಮ್‌ಜಿ ಫೌಂಡೇಶನ್ 2,000 ಕೋಟಿ ರೂ.ಗೂ ಅಧಿಕ ದೇಣಿಗೆ ನೀಡುವ ಭರವಸೆ ನೀಡಿದ್ದು ಇದು ಈ ಹಿಂದೆ ಹಂಚಿರುವ ದೇಣಿಗೆಗಿಂತ ಎರಡು ಪಟ್ಟು ಹೆಚ್ಚಾಗಿದೆ.
ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ನಿಟ್ಟಿನಲ್ಲಿ ತನ್ನ ಆರ್ಥಿಕ ಬದ್ಧತೆಯನ್ನು 1,125 ಕೋಟಿ ರೂ.ಯಿಂದ 2,125 ಕೋಟಿ ರೂ.ಗೆ ಹೆಚ್ಚಿಸಿದೆ ಎಂದು ಮಾಜಿ ವಿಪ್ರೋ ಅಧ್ಯಕ್ಷ ಅಝಿಮ್ ಪ್ರೇಮ್‌ಜಿ ಸ್ಥಾಪಿಸಿದ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
10 ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಸಂಬಂಧಿಸಿ ಗಣನೀಯವಾಗಿ ವಿಸ್ತರಿಸುತ್ತಿರುವ ಕೆಲಸವನ್ನು ಸಕ್ರಿಯಗೊಳಿಸಲು ನಾವು 2,125 ಕೋಟಿಗೆ ನಮ್ಮ ಬದ್ಧತೆಯನ್ನು ಹೆಚ್ಚಿಸಿದ್ದೇವೆ, ಅಗತ್ಯವಿದ್ದಲ್ಲಿ ಇದನ್ನು ಇನ್ನಷ್ಟು ಹೆಚ್ಚಿಸುವ ಬದ್ಧತೆ ಹೊಂದಿದ್ದೇವೆ ಎಂದು ಜೂನ್ 15 ರಂದು ಬಿಡುಗಡೆಯಾಗಿರುವ ಹೇಳಿಕೆಯೊಂದರಲ್ಲಿ ಪ್ರತಿಷ್ಠಾನವು ತಿಳಿಸಿದೆ.
ಛತ್ತೀಸ್ ಗಡ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಪುದುಚೇರಿ, ತೆಲಂಗಾಣ ಹಾಗೂ ಉತ್ತರಾಖಂಡದ ಕೆಲವು ಹಿಂದುಳಿದ ಪ್ರದೇಶಗಳಲ್ಲಿ 100 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 15 ಕೋಟಿ ಜನರಿಗೆ ಸೇವೆ ಸಲ್ಲಿಸಲು ಈಗಾಗಲೇ ಸಾಮರ್ಥ್ಯವನ್ನು ಸಜ್ಜುಗೊಳಿಸಿದ್ದೇವೆ ಎಂದು ಪ್ರತಿಷ್ಠಾನ ತಿಳಿಸಿದೆ.
ಇಲ್ಲಿಯವರೆಗೆ, ಪ್ರತಿಷ್ಠಾನವು 10,000 ಕ್ಕೂ ಹೆಚ್ಚು ಆಮ್ಲಜನಕಯುಕ್ತ ಹಾಸಿಗೆಗಳು, 1,000 ಐಸಿಯು ಹಾಸಿಗೆಗಳು, 18 ಪಿಎಸ್‌ಎ ಆಮ್ಲಜನಕ ಉತ್ಪಾದನಾ ಘಟಕಗಳು, 10,000 ಆಮ್ಲಜನಕ ಸಾಂದ್ರಕಗಳು, 80 ವೆಂಟಿಲೇಟರ್ ಗಳು, 300 ಬೈ-ಪಿಎಪಿ ಯಂತ್ರಗಳು, 600 ಹೈ ಫ್ಲೋ ನಸಲ್ ಕ್ಯಾನುಲಾಸ್ (ಎಚ್‌ಎಫ್‌ಎನ್‌ಸಿ) ಹಾಗೂ ಇತರ ಐಸಿಯು ಉಪಕರಣಗಳನ್ನು ಆಸ್ಪತ್ರೆ ಪೈಪಿಂಗ್ ಮತ್ತು ಸಿಲಿಂಡರ್‌ಗಳಂತಹ ಮೂಲಸೌಕರ್ಯ ಸೌಲಭ್ಯಗಳನ್ನು ಕೊಡುಗೆಯಾಗಿ ನೀಡಿದೆ.