ನವದೆಹಲಿ: ದೇಶದಲ್ಲಿ 2019ರಲ್ಲಿ ನಡೆದ ಎಲ್ಲಾ ಚುನಾವಣೆಗಳ ಮಾಹಿತಿ ಹಾಗೂ ದತ್ತಾಂಶಗಳನ್ನೊಳಗೊಂಡ ಪುಸ್ತಕ "ಸಾರ್ವತ್ರಿಕ ಚುನಾವಣೆಗಳು- 2019 ಅಟ್ಲಾಸ್" ಅನ್ನು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮತ್ತು ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್, ಅನೂಪ್ ಚಂದ್ರ ಪಾಂಡೆ ಬಿಡುಗಡೆಗೊಳಿಸಿದರು.
ಈ ಚುನಾವಣಾ ದಾಖಲೆಗಳ ಸಂಕಲನ ಕಾರ್ಯಕ್ಕೆ ಸುಶೀಲ್ ಚಂದ್ರ ಅವರು ಆಯೋಗದ ಅಧಿಕಾರಿಗಳನ್ನು ಶ್ಲಾಘಿಸಿದರು.
"2019ರ ಚುನಾವಣೆಯ ಎಲ್ಲಾ ಮಾಹಿತಿಗಳು ಹಾಗೂ ದತ್ತಾಂಶಗಳನ್ನು ಈ ಅಟ್ಲಾಸ್ ಒಳಗೊಂಡಿದೆ. ಇದರಲ್ಲಿರುವ 42 ವಿಷಯಾಧಾರಿತ ನಕ್ಷೆಗಳು ಮತ್ತು 90 ಕೋಷ್ಟಕಗಳು ಚುನಾವಣೆಯ ವಿವಿಧ ಅಂಶಗಳನ್ನು ವಿವರಿಸುತ್ತವೆ. ಈ ಅಟ್ಲಾಸ್‌ನಲ್ಲಿ ಭಾರತದ ಚುನಾವಣೆಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ಸಂಗತಿಗಳು, ಉಪಾಖ್ಯಾನಗಳು ಮತ್ತು ಕಾನೂನು ನಿಬಂಧನೆಗಳು ಇವೆ. ಇವು ಭಾರತದ ಚುನಾವಣೆಗಳ ಕುರಿತು ಇನ್ನಷ್ಟು ಅನ್ವೇಷಣೆ ನಡೆಸಲು ಶಿಕ್ಷಣ ತಜ್ಞರು ಮತ್ತು ಸಂಶೋಧಕರಿಗೆ ಪ್ರೇರಣೆ ನೀಡುತ್ತದೆ," ಎಂದು ಹೇಳಿದರು.
1951-52ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಆಯೋಗ ಚುನಾವಣಾ ದತ್ತಾಂಶಗಳನ್ನು ಪುಸ್ತಕಗಳ ರೂಪದಲ್ಲಿ ಪ್ರಕಟಿಸುತ್ತಿದೆ. ದೇಶದಲ್ಲಿ ಯಾವುದೇ ಚುನಾವಣಾ ಪ್ರಕ್ರಿಯೆಯ ಮುಕ್ತಾಯದ ನಂತರ, ಭಾರತದ ಚುನಾವಣಾ ಆಯೋಗ ಆಯಾ ಚುನಾವಣಾ ದತ್ತಾಂಶವನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸುತ್ತದೆ.
543 ಸಂಸದೀಯ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳಿಂದ ಲಭ್ಯವಿರುವ ಚುನಾವಣಾ ಮಾಹಿತಿಯ ಆಧಾರದ ಮೇಲೆ ಆಯೋಗ 2019ರ ಅಕ್ಟೋಬರ್‌ನಲ್ಲಿ ದತ್ತಾಂಶ ವರದಿ ಬಿಡುಗಡೆ ಮಾಡಿತು.
ಅಟ್ಲಾಸ್‌ನಲ್ಲಿನ ನಕ್ಷೆಗಳು ಮತ್ತು ಕೋಷ್ಟಕಗಳು ಮಾಹಿತಿಯನ್ನು ವಿವರವಾಗಿ ಚಿತ್ರಿಸುತ್ತವೆ ಮತ್ತು ದೇಶದ ಚುನಾವಣಾ ವೈವಿಧ್ಯತೆಯ ಬಗ್ಗೆ ಉತ್ತಮ ತಿಳಿವಳಿಕೆ ನೀಡುತ್ತವೆ. ಈ ಅಟ್ಲಾಸ್ ಮಾಹಿತಿ ಮತ್ತು ವಿವರಣಾತ್ಮಕ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಭಾರತದ ಚುನಾವಣಾ ಪ್ರಕ್ರಿಯೆಯ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿಸುವ ಮೂಲಕ ಓದುಗರಿಗೆ ನೆರವಾಗುತ್ತದೆ ಎಂದು ಸುಶೀಲ್ ಚಂದ್ರ ಮೆಚ್ಚುಗೆ ಸೂಚಿಸಿದರು.
https://eci.gov.in/ebooks/eci-atlas/index.html?utm_source=DH-MoreFromPub&utm_medium=DH-app&utm_campaign=DH ನಲ್ಲಿ ಇ-ಅಟ್ಲಾಸ್ ಲಭ್ಯವಿದೆ. ಸಲಹೆಗಳನ್ನು ಆಯೋಗದ ಇಡಿಎಂಡಿ ವಿಭಾಗದೊಂದಿಗೆ ಹಂಚಿಕೊಳ್ಳಬಹುದಾಗಿದೆ.