ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳಲ್ಲಿ ಚುನಾವಣಾ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿ ತಾನು ಪ್ರತಿನಿಧಿಸಿದ್ದ ಎರಡು ಪಕ್ಷಗಳ ಗೆಲುವಿಗೆ ಕಾರಣರಾಗಿದ್ದ ಪ್ರಶಾಂತ್ ಕಿಶೋರ್ ರನ್ನು ಭೇಟಿಯಾಗಿದ್ದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಪ್ರಶಾಂತ್ ಕಿಶೋರ್ ಶರದ್ ಪವಾರ್ ರ ಮುಂಬೈ ನಿವಾಸಕ್ಕೆ ಆಗಮಿಸಿದ್ದು, ನಿನ್ನೆ ಬೆಳಗ್ಗೆ 11 ಗಂಟೆಗೆ ಭೇಟಿಯಾಗಿ 2 ಗಂಟೆಯ ವೇಳೆಗೆ ವಾಪಸಾಗಿದ್ದಾರೆ ಎಂದು theprint.in ವರದಿ ಮಾಡಿದೆ. ಪಶ್ಚಿಮ ಬಂಗಾಳದ ಗೆಲುವಿನ ಬಳಿಕ ಮುಂಬರುವ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕುರಿತು ಮಾತುಕತೆಗಳು ನಡೆದಿರುವ ಸಾಧ್ಯತೆ ಇದೆ ಎಂದು ವರದಿ ಅಭಿಪ್ರಾಯಿಸಿದೆ.
ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಹಾಗೂ ತಮಿಳುನಾಡಿನ ದ್ರಾವಿಡ ಮುನ್ನೇಟ್ರ ಕಝಗಂ ಪಕ್ಷದ ಪರ ಚುನಾವಣಾ ತಂತ್ರಜ್ಞರಾಗಿ ಪ್ರಶಾಂತ್ ಕಿಶೋರ್ ಕಾರ್ಯ ನಿರ್ವಹಿಸಿದ್ದರು. ಈ ಎರಡೂ ಪಕ್ಷಗಳು ಅಭೂತಪೂರ್ವ ಜಯ ಸಾಧಿಸಿದ್ದವು.
"ಅದೊಂದು ಮುಚ್ಚಿದ ಬಾಗಿಲಿನ ಭೇಟಿಯಾಗಿತ್ತು. ಎನ್ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಸಭೆಯಲ್ಲಿ ಉಪಸ್ಥಿತರಿದ್ದರು. ಅವರು ಏನು ಮಾತನಾಡಿದ್ದಾರೆಂದು ನಮಗೆ ತಿಳಿಸಿಲ್ಲ. ಆದರೆ ಈಗಿನ ರಾಜಕೀಯದ ಪರಿಸ್ಥಿತಿ ಕುರಿತಾದಂತೆ ಅವರು ಮಾತನಾಡಿರುವ ಕುರಿತು ಯಾವುದೇ ಸಂಶಯವಿಲ್ಲ" ಎಂದು ಪವಾರ್ ಆಪ್ತರಾಗಿರುವ ಎನ್ಸಿಪಿ ಮುಖಂಡರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶವನ್ನು ನೋಡಿ ನಮಗೆ ಮುಂಬರುವ ಲೋಕಸಭಾ ಚುನಾವಣೆಯ ಹಣೆಬರಹವನ್ನು ನಿರ್ಧರಿಸಬಹುದು ಎಂದು ಶರದ್ ಪವಾರ್ ಈ ಹಿಂದೆ ಹೇಳಿದ್ದರು. ಹಾಗಾಗಿ ಅವರು ಪ್ರಶಾಂತ್ ಕಿಶೋರ್ ರನ್ನು ಕರೆಸಿ ಮುಂದಿನ ಚುನಾವಣೆಯ ಕುರಿತು ಮಾತುಕತೆ ನಡೆಸಿರಬಹುದು ಎಂದು ವರದಿ ತಿಳಿಸಿದೆ.