ನವದೆಹಲಿ: ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ದೇಶದಲ್ಲಿ ಲಸಿಕೆ ಅಭಿಯಾನದ ವಿರುದ್ಧ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹರಡುತ್ತಿರುವ ಆತಂಕಗಳನ್ನು ಹೋಗಲಾಡಿಸಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಜೂನ್ 21 ರಿಂದ ಅಭಿಯಾನ ನಡೆಸಲಿದೆ ಎಂದು ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಶನಿವಾರ ಹೇಳಿದರು.
'ಜೀವ ಇದ್ದರೆ ಜೀವನ' ಕಾರ್ಯಕ್ರಮದ ಅಂಗವಾಗಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ವಿವಿಧ ಸಾಮಾಜಿಕ-ಶಿಕ್ಷಣ ಸಂಸ್ಥೆಗಳು, ಎನ್‌ಜಿಒಗಳು ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳೊಂದಿಗೆ ಈ ಜಾಗೃತಿ ಅಭಿಯಾನ ಪ್ರಾರಂಭಿಸಲಿದೆ ಎಂದು ಅವರು ಹೇಳಿದರು.
ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಿಂದ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಅಭಿಯಾನದ ಭಾಗವಾಗಿ ದೇಶದಾದ್ಯಂತ ಬೀದಿ ನಾಟಕಗಳನ್ನು ಸಹ ಆಯೋಜಿಸಲಾಗುವುದು. ವಿವಿಧ ಧಾರ್ಮಿಕ ಮುಖಂಡರು, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ವೈದ್ಯಕೀಯ, ವಿಜ್ಞಾನ ಮತ್ತು ಇತರ ಕ್ಷೇತ್ರಗಳ ಗಣ್ಯರು ಜನರು ಲಸಿಕೆ ಪಡೆಯುವಂತೆ ಪರಿಣಾಮಕಾರಿ ಸಂದೇಶಗಳನ್ನು ನೀಡಲಿದ್ದಾರೆ ಎಂದು ಅವರು ಹೇಳಿದರು.
'ಸ್ವದೇಶಿಯಾಗಿ ತಯಾರಿಸಿದ ಎರಡು ಕೋವಿಡ್ ಲಸಿಕೆಗಳು ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮದ ಫಲವಾಗಿವೆ. ಈ ಲಸಿಕೆಗಳು ಸಂಪೂರ್ಣ ಸುರಕ್ಷಿತ ಮತ್ತು ವೈಜ್ಞಾನಿಕವಾಗಿವೆ ಎನ್ನುವುದು ಸಾಬೀತಾಗಿದೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇವು ಪರಿಣಾಮಕಾರಿ ಅಸ್ತ್ರವಾಗಿವೆ' ಎಂದು ಸಚಿವರು ಹೇಳಿದರು.