ನವದೆಹಲಿ: ದೇಶದಲ್ಲಿ ಇದುವರೆಗೆ 22 ಡೆಲ್ಟಾ ಪ್ಲಸ್ ರೂಪಾಂತರಿ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಈ ರೂಪಾಂತರಿ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಒಟ್ಟಾರೆ ಪತ್ತೆಯಾಗಿರುವ 22 ರೂಪಾಂತರಿ ಡೆಲ್ಟಾ ಪ್ಲಸ್ ಪ್ರಕರಣಗಳ ಪೈಕಿ 16 ಪ್ರಕರಣಗಳು ಮಹಾರಾಷ್ಟ್ರದ ರತ್ನಾಗಿರಿ ಮತ್ತು ಜಲ್ಗಾಂವ್ ನಲ್ಲಿ ಪತ್ತೆಯಾಗಿವೆ. ಇನ್ನುಳಿದ ಪ್ರಕರಣಗಳು ಮಧ್ಯಪ್ರದೇಶ ಮತ್ತು ಕೇರಳದಲ್ಲಿ ವರದಿಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಕೋವಿಡ್ -19 ರ 'ಡೆಲ್ಟಾ-ಪ್ಲಸ್' ರೂಪಾಂತರಿಯನ್ನು ವಿಶ್ವ ಆರೋಗ್ಯ ಸಂಸ್ಥೆ 'ಕರಿಯಂಟ್ ಆಫ್ ಕನ್ಸರ್ನ್' ಎಂದು ವರ್ಗೀಕರಿಸಿದೆ. ಡೆಲ್ಟಾ-ಪ್ಲಸ್ 'ಡೆಲ್ಟಾ' ರೂಪಾಂತರದ ಸ್ವರೂಪವಾಗಿದ್ದು ಇದು ದೇಶದಲ್ಲಿ ಎರಡನೇ ಕೊರೋನಾ ಅಲೆಗೆ ಕಾರಣವಾಗಿತ್ತು.
ಭಾರತದಲ್ಲಿ ಕೊರೋನಾ 2ನೇ ಅಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 42,640 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದು ಕಳೆದ 91 ದಿನದಲ್ಲೇ ದೃಢಪಟ್ಟ ಕನಿಷ್ಠ ಸಂಖ್ಯೆಯಾಗಿದೆ. ಇನ್ನು ಇದೇ ಅವಧಿಯಲ್ಲಿ 1,167 ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆ.