ನವದೆಹಲಿ: ಕಾಂಗ್ರೆಸ್ ನ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿದ್ದ ಜಿ-23 ರ ನಾಯಕರ ವಿರುದ್ಧ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನ ನಾಯಕ ಸಲ್ಮಾನ್ ಖುರ್ಷಿದ್ ಟೀಕಾ ಪ್ರಹಾರ ನಡೆಸಿದ್ದಾರೆ.
ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಖುರ್ಷಿದ್, ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ, ಚುನಾವಣೆ, ಸುಧಾರಣೆಗಳ ಬಗ್ಗೆ ಮಾತನಾಡುತ್ತಿರುವವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪ್ರಶ್ನೆ ಮಾಡುತ್ತಿರುವವರೂ ಸಹ ಚುನಾವಣೆ ಎದುರಿಸಿಯೇ ಆ ಸ್ಥಾನಕ್ಕೆ ಏರಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
"ಸುಧಾರಣೆಗಳು ತ್ಯಾಗದಿಂದ ಸಾಧ್ಯವಾಗುತ್ತದೆಯೇ ಹೊರತು ವರ್ಷಗಳಿಂದ ಲಾಭ ಪಡೆದಿದ್ದನ್ನು ಏಕಾ ಏಕಿ ಪ್ರಶ್ನಿಸುವುದರಿಂದ ಅಲ್ಲ" ಎಂದು ಖುರ್ಷಿದ್ ಅಭಿಪ್ರಾಯಪಟ್ಟಿದ್ದಾರೆ.
ಜಿ-23 (ಗ್ರೂಪ್ ಆಫ್ 23) ಯಲ್ಲಿ ಗುರುತಿಸಿಕೊಂಡಿರುವ ಎಂ ವೀರಪ್ಪ ಮೋಯ್ಲಿ, ಹೆಚ್ಚು ಸ್ಪರ್ಧಾತ್ಮಕವಾಗಿರುವುದಕ್ಕೆ ಪಕ್ಷಕ್ಕೆ ಮೇಜರ್ ಸರ್ಕರಿಯಾಗುವ ಅಗತ್ಯವಿದೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ಖುರ್ಷಿದ್ ಈ ಹೇಳಿಕೆ ನೀಡಿದ್ದು, ಈ ರೀತಿಯ ಅದ್ಭುತ ಮಾತುಗಳು ಉತ್ತರವಾಗುವುದಿಲ್ಲ, 10 ವರ್ಷಗಳಿಂದ ಎದುರಾಗಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ನಾಯಕರು ಸಹಕರಿಸಬೇಕು ಎಂದು ಹೇಳಿದ್ದಾರೆ.
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸಬೇಕೇ ಬೇಡವೇ ಎಂಬುದರ ಬಗ್ಗೆ ರಾಹುಲ್ ಗಾಂಧಿ ಸ್ವತಃ ನಿರ್ಧರಿಸಬೇಕಿದೆ. ರಾಹುಲ್ ಗಾಂಧಿ ಅಧ್ಯಕ್ಷರಾಗಲೀ ಬಿಡಲೀ ಅವರೇ ನಮ್ಮ ನಾಯಕರು ಎಂದೂ ಖುರ್ಷಿದ್ ತಿಳಿಸಿದ್ದಾರೆ.
ಪಕ್ಷ ಸಂಘಟನೆಯ ಎಲ್ಲಾ ಹಂತಗಳಲ್ಲೂ ಮೇಜರ್ ಸರ್ಜರಿಯಾಗಬೇಕಿದೆ ಎಂಬ ಕಪಿಲ್ ಸಿಬಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಮೇಜರ್ ಸರ್ಜರಿ ಮಾಡಿದರೆ ಸಂತೋಷ, ಆದರೆ ಯಾವುದನ್ನು ತೆಗೆಯುತ್ತೀರಿ? ನನ್ನ ಲಿವರ್, ಕಿಡ್ನಿ ಅಥವಾ ಯಾವ ಸರ್ಜರಿ ಅಂತ ಯಾರಾದರೂ ಹೇಳಲಿ ಎಂದು ವ್ಯಂಗ್ಯವಾಡಿದ್ದಾರೆ.