ತಿರುವನಂತಪುರ: ಕೌಟುಂಬಿಕ ಹಿಂಸಾಚಾರವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಪರಿಚಯಿಸಿದ ವ್ಯವಸ್ಥೆಯು ಮೊದಲ ದಿನವೇ ಭಾರೀ ಸಂಖ್ಯೆಯ ದೂರುಗಳು ದಾಖಲಾಗಿ ಯೋಜನೆ ಯಶಸ್ವಿ ಎಂಬ ಸಂಕೇತ ನೀಡಿದಂತಿದೆ. ರಾಜ್ಯಕ್ಕೆ ವರದಕ್ಷಿಣೆ ಕಿರುಕುಳದ 108 ದೂರುಗಳು ನಿನ್ನೆಯೊಂದೇ ದಿನ ದಾಖಲಾಗಿವೆ. ಪತ್ತನಂತಿಟ್ಟು ಜಿಲ್ಲಾ ಪೋಲೀಸ್ ಮುಖ್ಯಸ್ಥೆ ಆರ್.ನಿಶಾಂತಿನಿ ವರದಕ್ಷಿಣೆ / ಕೌಟುಂಬಿಕ ಹಿಂಸಾಚಾರದ ರಾಜ್ಯ ನೋಡಲ್ ಅಧಿಕಾರಿ.
ನೋಡಲ್ ಅಧಿಕಾರಿ ನಿಶಾಂತಿನಿ ಅವರಿಗೆ ನಿನ್ನೆ 108 ದೂರುಗಳು ಬಂದಿವೆ. ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಸಂಬಂಧಿತ ದೂರುಗಳನ್ನು ವರದಿ ಮಾಡಲು ಸರ್ಕಾರ ಸ್ಥಾಪಿಸಿರುವ ಅಪರಾಜಿತಾ ಎಂಬ ಇ-ಮೇಲ್ ಮೂಲಕ 76 ದೂರುಗಳು ಬಂದಿವೆ. ಒಟ್ಟು 28 ಜನರು ಯೋಜನೆಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಸಂಜೆ 7 ಗಂಟೆಯವರೆಗಿನ ವರದಿಯನುಸಾರ ಇಷ್ಟೊಂದು ದೂರುಗಳು ದಾಖಲಾಗಿದೆ.
ವರದಕ್ಷಿಣೆ ಸಂಬಂಧಿತ ಹಿಂಸಾಚಾರ ಸೇರಿದಂತೆ ಕೌಟುಂಬಿಕ ಹಿಂಸಾಚಾರದ ಬಗ್ಗೆ ದೂರು ನೀಡಲು ಈ ವ್ಯವಸ್ಥೆಯನ್ನು ಮಂಗಳವಾರವಷ್ಟೇ ಆರಂಭಿಸಲಾಗಿತ್ತು. ಅಂತಹ ದೂರುಗಳನ್ನು ಹೊಂದಿರುವವರು aparajitha.pol@kerala.gov.in ಗೆ ಇಮೇಲ್ ಕಳುಹಿಸಬಹುದು. ಜೊತೆಗೆ ಮೊಬೈಲ್ ಸಂಖ್ಯೆ 94 97 99 69 92 ಕ್ಕೂ ದೂರು ಸಲ್ಲಿಸಬಹುದು.
ಪೋಲೀಸ್ ಪ್ರಧಾನ ಕಚೇರಿಯಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಈ ವ್ಯವಸ್ಥೆ ರಾಜ್ಯ ಪೋಲೀಸ್ ಮುಖ್ಯಸ್ಥರ ನಿಯಂತ್ರಣ ಕೊಠಡಿಯಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಪೋನ್ 94 97 90 09 99, 94 97 90 02 86 ಎಂಬ ಸಂ|ಖ್ಯೆಗೆ ದೂರು ನೀಡಬಹುದು.