ಕೋಝಿಕ್ಕೋಡ್: ಆಪರೇಷನ್ ಪಿ ಹಂಟ್‍ನ ಅಂಗವಾಗಿ ನಿನ್ನೆ ಪೋಲೀಸರು ರಾಜ್ಯದ ವಿವಿಧ ಭಾಗಗಳಲ್ಲಿ ಮಿಂಚಿನ ತಪಾಸಣೆ ನಡೆಸಿದರು. ಮಕ್ಕಳ ಅಶ್ಲೀಲ ಚಿತ್ರಗಳನ್ನು ಆನ್‍ಲೈನ್‍ನಲ್ಲಿ ವೀಕ್ಷಿಸುವವರು ಮತ್ತು ಅಂತಹ ಚಿತ್ರಗಳನ್ನು ಹಂಚಿಕೊಳ್ಳುವವರ ವಿರುದ್ಧ ಪೋಲೀಸರು ಕ್ರಮ ಕೈಗೊಂಡಿದ್ದಾರೆ. ಕಣ್ಣೂರು, ಮಲಪ್ಪುರಂ, ಇಡುಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ವಿವಿಧ ಪೋಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ.
ಕಣ್ಣೂರಿನಲ್ಲಿ 25 ಜನರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಪೋಲೀಸರು ಮೊಬೈಲ್ ಪೋನ್ ಗಳನ್ನೂ ವಶಪಡಿಸಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆಯಿಂದ ದಾಳಿ ನಡೆಸಲಾಗಿತ್ತು. ಪ್ರಕರಣವನ್ನು ತಳಿಪರಂಬ, ಧರ್ಮಡಂ, ಪಾನೂರ್, ವಳಪಟ್ಟಣಂ ಮತ್ತು ಪಿಣರಾಯಿ ಠಾಣೆಗಳಲ್ಲಿ ದಾಖಲಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಪೈಕಿ ಸುಮಾರು 25 ಸಾವಿರ ರೂ. ನಗದು ಒಳಗೊಂಡಿದೆ.
ಮಲಪ್ಪುರಂನಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಬಂಗಾಳಿ ಪ್ರಜೆಯೂ ಸೇರಿದ್ದಾನೆ. ಮಕ್ಕಳ ಅಶ್ಲೀಲ ವಿಡಿಯೋ ಡೌನ್‍ಲೋಡ್ ಮಾಡಿ ಅದನ್ನು ಮೊಬೈಲ್ ಪೋನ್‍ನಲ್ಲಿ ಶೇಖರಿಸಿಟ್ಟಿದ್ದಕ್ಕಾಗಿ ತಿರುರಂಗಾಡಿ ಪೋಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಗೌಪ್ಯ ಮಾಹಿತಿಯ ಆಧಾರದ ಮೇಲೆ ಆತನನ್ನು ಪೋಲೀಸರು ಬಂಧಿಸಿದ್ದಾರೆ. ನೀಲಂಬೂರಿನಿಂದ ಬಂಗಾಳಿ ವ್ಯಕ್ತಿಯೊಬ್ಬನನ್ನೂ ಬಂಧಿಸಲಾಗಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಎಸ್.ಕೆ.ರಾಹುಲ್ ನ್ನು ನಿಲಾಂಬೂರ್ ಪೋಲೀಸರು ಬಂಧಿಸಿದ್ದಾರೆ.
ತ್ರಿಶೂರ್ ಚಾವಕ್ಕಾಡ್ ಪ್ರದೇಶದ ಮೂರು ಮನೆಗಳಿಗೆ ಪೋಲೀಸರು ಮಿಂಚಿನ ತಪಾಸಣೆ ನಡೆಸಿದರು. ಶೋಧದ ವೇಳೆ ಅಶ್ಲೀಲ ಚಿತ್ರಗಳನ್ನು ಹರಡಲು ಬಳಸಿದ ಮೂರು ಪೋನ್‍ಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಸೈಬರ್ ಸೆಲ್ ಸಹಾಯದಿಂದ ತನಿಖೆ ನಡೆಸಲಾಯಿತು. ಇಡುಕಿಯಲ್ಲಿ ಅಶ್ಲೀಲ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡುವ ಇಬ್ಬರು ವ್ಯಕ್ತಿಗಳ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಅವರ ಮೊಬೈಲ್ ಪೋನ್ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಅಶ್ಲೀಲ ಚಿತ್ರಗಳನ್ನು ನೋಡಿದವರಲ್ಲಿ ವಿದ್ಯಾರ್ಥಿಗಳೂ ಇದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.