ನವದೆಹಲಿ: ಭಾರತ ಮತ್ತು ಚೀನಾದ ನಡುವೆ ಇನ್ನೂ ಉದ್ವಿಗ್ನ ವಾತಾವರಣ ಮುಂದುವರೆದೇ ಇದೆ. ಈ ಎರಡು ಅಣ್ವಸ್ತ್ರ ಶಕ್ತಿ ರಾಷ್ಟ್ರಗಳ ನಡುವಿನ ದ್ವೇಷದ ಜ್ವಾಲೆ ಇನ್ನೂ ಉರಿಯುತ್ತಿರುವ ನಡುವೆಯೇ, ಚೀನಾಕ್ಕೆ ತಕ್ಕ ಬುದ್ಧಿ ಕಲಿಸಲು ಭಾರತ ಇನ್ನೂ 50 ಸಾವಿರ ಹೆಚ್ಚುವರಿ ಯೋಧರನ್ನು ಗಡಿಯತ್ತ ನಿಯೋಜನೆ ಮಾಡಿದೆ.
ಈ ಮೊದಲು ಗಾಲ್ವಾನ್ ಗಡಿಯಲ್ಲಿ ಒಂದೂವರೆ ಲಕ್ಷದಷ್ಟು ಯೋಧರಿದ್ದು, ಇದೀಗ ಸಂಖ್ಯೆ 2 ಲಕ್ಷಕ್ಕೆ ಏರಿದೆ. ಈ ಮೂಲಕ ಭಾರತವು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಗಾಲ್ವಾನ್ ಸಂಘರ್ಷದ ಪೂರ್ವದ ಸ್ಥಿತಿಗೆ ಹೋಲಿಸಿದರೆ ಶೇ.40 ಯೋಧರ ಸಂಖ್ಯೆ ಹೆಚ್ಚಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ಈ ಎರಡು ದೇಶಗಳ ನಡುವೆ ಭಾರಿ ಬಿಕ್ಕಟ್ಟು ತಲೆದೋರಿತ್ತು. ಜತೆಗೆ ಇನ್ನೊಂದೆಡೆ ಪಾಕಿಸ್ತಾನದ ಕಾಟ. ಈ ದೇಶಗಳಿಗೆ ಪಾಠ ಕಲಿಸಲು ಇದಾಗಲೇ ಭಾರತ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಸಂಭವನೀಯ ಯುದ್ಧಕ್ಕೆ ಸಿದ್ಧರಾಗಿರುವಂತೆ ಸಶಸ್ತ್ರ ಪಡೆಗಳಿಗೆ ಸೂಚಿಸಿದೆ.