ನವದೆಹಲಿ: ಕೋವಿಡ್-19ನ ಎರಡನೇ ಅಲೆ ದೇಶದ ಕೃಷಿ ವಲಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನೀತಿ ಆಯೋಗದ ಸದಸ್ಯ (ಕೃಷಿ ಕ್ಷೇತ್ರ) ರಮೇಶ ಚಾಂದ್ ಭಾನುವಾರ ಹೇಳಿದ್ದಾರೆ.
'ದೇಶದ ಗ್ರಾಮೀಣ ಭಾಗದಲ್ಲಿ ಮೇ ತಿಂಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿದ್ದವು. ಆ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳು ಅಷ್ಟೇನು ಚುರುಕಾಗಿ ನಡೆದಿರಲಿಲ್ಲ' ಎಂದು ಅವರು ವಿವರಿಸಿದ್ದಾರೆ.
ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಮಾತನಾಡಿದ್ದಾರೆ.
'ಮೇ ತಿಂಗಳಲ್ಲಿ ಬಿತ್ತನೆ ಇರುವುದಿಲ್ಲ. ಕೊಯ್ಲು ಸಹ ನಡೆಯುವುದಿಲ್ಲ. ಕೆಲ ಮಟ್ಟಿಗೆ ತರಕಾರಿಗಳನ್ನು, ಇತರ ಕೆಲವು ಬೆಳೆಗಳನ್ನು ಬೆಳೆಯಲಾಗುತ್ತದೆ' ಎಂದರು.
'ಸಬ್ಸಿಡಿ, ತಂತ್ರಜ್ಞಾನ ಹಾಗೂ ಬೆಲೆಗೆ ಸಂಬಂಧಿಸಿದ ನೀತಿಗಳು ಅಕ್ಕಿ, ಗೋಧಿ ಹಾಗೂ ಕಬ್ಬು ಕೃಷಿ ಪರವಾಗಿಯೇ ಇವೆ. ಅದೇ ರೀತಿ, ದ್ವಿದಳ ಧಾನ್ಯಗಳ ಖರೀದಿ, ಅವುಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕುರಿತು ನೀತಿ ನಿರೂಪಿಸುವ ಅಗತ್ಯವಿದೆ' ಎಂದು ಪ್ರತಿಪಾದಿಸಿದರು.
'ನೀರಾವರಿ ಸೌಲಭ್ಯವಿರುವ ಕಡೆಗಳಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯುವ ಪ್ರದೇಶವನ್ನು ಹೆಚ್ಚಿಸಬೇಕು. ಅಂದಾಗ ಮಾತ್ರ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಿ, ಅವುಗಳ ಬೆಲೆಗಳಲ್ಲಿ ಸ್ಥಿರತೆ ಸಾಧಿಸಲು ಸಾಧ್ಯ' ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
'2021-22ನೇ ಸಾಲಿನಲ್ಲಿ ಕೃಷಿ ವಲಯವು ಶೇ 3ರಷ್ಟು ಪ್ರಗತಿ ದಾಖಲಿಸಲಿದೆ' ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.