ನಾಗಾಲ್ಯಾಂಡ್: ವಯಸ್ಸು ಬರೀ ಸಂಖ್ಯೆಯಷ್ಟೆ- ಈ ಮಾತನ್ನು ಸಾಮಾನ್ಯವಾಗಿ ವಯಸ್ಸಾದವರಿಗೆ ಬಳಸುತ್ತಾರೆ. ಆದರೆ ಈ ಮೂರರ ಪುಟಾಣಿಗೂ ಇದೇ ಮಾತನ್ನು ಬಳಸಬಹುದೇನೋ. ಈ ಪುಟ್ಟ ವಯಸ್ಸಿನಲ್ಲೇ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದು, ಈಕೆಯ ನಡೆಗೆ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.
ನಾಗಾಲ್ಯಾಂಡ್‌ನ ಈ ಪುಟ್ಟ ಹುಡುಗಿಯ ಜಾಣ್ಮೆ, ಜವಾಬ್ದಾರಿ ಪ್ರದರ್ಶಿಸಿದ ಈ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಈ ಪುಟಾಣಿ ಮಾಡಿದ್ದು ಏನು?
ಮೂರು ವರ್ಷದ ಲಿಪಾವಿಗೆ ಇದ್ದಕ್ಕಿದ್ದಂತೆ ನೆಗಡಿ ಆರಂಭವಾಗಿದೆ. ತನ್ನ ಆರೋಗ್ಯ ಸರಿಯಿಲ್ಲ ಅನ್ನಿಸಿದೆ. ಅಪ್ಪ ಅಮ್ಮ ಇಬ್ಬರೂ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದರು. ಹೀಗಾಗಿ ತಾನೇ ಯಾರ ಸಹಾಯವನ್ನೂ ಪಡೆಯದೇ ತನ್ನ ಮನೆ ಸಮೀಪವಿದ್ದ ಆಸ್ಪತ್ರೆಗೆ ಬಂದು ವೈದ್ಯರನ್ನು ಭೇಟಿ ಮಾಡಿದ್ದಾಳೆ. ಇಷ್ಟು ಪುಟ್ಟ ಹುಡುಗಿ ಒಬ್ಬಳೇ ಬಂದಿದ್ದನ್ನು ಕಂಡ ವೈದ್ಯರೂ ಆಕೆಯನ್ನು ವಿಚಾರಿಸಿದ್ದಾರೆ. ತನ್ನ ಆರೋಗ್ಯದ ಬಗ್ಗೆ ತಾನೇ ಕಾಳಜಿ ವಹಿಸಿ ಬಂದ ಬಾಲಕಿಯನ್ನು ಕಂಡು ಅಚ್ಚರಿಗೊಂಡಿದ್ದಾರೆ.
ನಂತರ ಆಕೆಯ ಸಮಸ್ಯೆ ಆಲಿಸಿ, ಚಿಕಿತ್ಸೆ ನೀಡಿ ಮನೆಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಈ ವಿಷಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಆಕೆಗಿರುವ ಆರೋಗ್ಯ ಕಾಳಜಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೊಡ್ಡವರೇ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಲಿಪಾವಿ ತನ್ನ ಮುಗ್ಧತೆಯೊಂದಿಗೆ ಜವಾಬ್ದಾರಿಯನ್ನೂ ಪ್ರದರ್ಶಿಸಿದ್ದಾಳೆ ಎಂದು ಮೆಚ್ಚಿಕೊಂಡಿದ್ದಾರೆ.
ಇಷ್ಟು ಪುಟ್ಟ ಹುಡುಗಿ ಒಬ್ಬಳೇ ಮನೆಯಿಂದ ಹೊರಗೆ ಬರುವುದರ ಕುರಿತು ಕೆಲವು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಮನೆಯಿಂದ ಸಮೀಪದಲ್ಲೇ ಇರುವ ಆಸ್ಪತ್ರೆ ಇದಾಗಿದ್ದು, ಯಾವುದೇ ತೊಂದರೆಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಪುಟ್ಟ ಹುಡುಗಿ ದೊಡ್ಡವರಿಗೂ ಉದಾಹರಣೆಯಾಗಿದ್ದಾಳೆ ಎಂದಿದ್ದಾರೆ.