ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮೋಟಾರು ವಾಹನ ದಾಖಲೆಗಳಾದ ಚಾಲನಾ ಪರವಾನಗಿ(ಡಿಎಲ್), ವಾಹನದ ನೋಂದಣಿ ಪ್ರಮಾಣ ಪತ್ರ (ಆರ್‌ಸಿ) ಸೇರಿದಂತೆ ವಿವಿಧ ಪರವಾನಗಿ ದಾಖಲೆಗಳ ಸಿಂಧುತ್ವಕ್ಕೆ ನಿಗದಿಪಡಿಸಿದ್ದ ಗಡುವನ್ನು ಸರ್ಕಾರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.
ಈ ಕುರಿತು ಗುರುವಾರ ಆದೇಶ ಹೊರಡಿಸಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(ಎಂಆರ್‌ಟಿಎಚ್) ವಾಹನಗಳ ಫಿಟ್ನೆಸ್, ಪರ್ಮಿಟ್(ಎಲ್ಲ ರೀತಿಯ), ಲೈಸೆನ್ಸ್, ರಿಜಿಸ್ಟ್ರೇಷನ್ ಅಥವಾ ಇನ್ನಿತರೆ ದಾಖಲಾತಿಗಳ ಮಾನ್ಯ ಮಾಡುವುದನ್ನು ಸೆ. 30ರವರೆಗೆ ವಿಸ್ತರಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸಲಹೆ ನೀಡಿದೆ.
'ಇದು ಫೆಬ್ರವರಿ 1, 2020 ರಿಂದ ಅವಧಿ ಮೀರಿದ ಅಥವಾ ಸೆಪ್ಟೆಂಬರ್ 30, 2021 ರೊಳಗೆ ಪರವಾನಗಿ ಮುಕ್ತಾಯಗೊಳ್ಳುವ ಎಲ್ಲಾ ವಾಹನಗಳಿಗೂ ಅನ್ವಯಿಸಲಿದೆ. ಈ ಗಡುವು ವಿಸ್ತರಣೆಯಿಂದಾಗಿ ನಾಗರಿಕರು ಸಾರಿಗೆ ಸಂಬಂಧಿ ಸೇವೆಗಳನ್ನು ಪಡೆಯುವ ವೇಳೆ ಕಚೇರಿಗಳಲ್ಲಿ ಜನದಟ್ಟಣೆಯಾಗುವುದನ್ನು ತಪ್ಪಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಸಹಾಯವಾಗುತ್ತದೆ' ಎಂದು ಸಚಿವಾಲಯ ತಿಳಿಸಿದೆ.
ಈ ಹೊಸ ಸಲಹೆಯನ್ನು ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನಗೊಳಿಸುವ ಮೂಲಕ ಇಂಥ ಸಂಕಷ್ಟದ ಸಮಯದಲ್ಲೂ ಕಾರ್ಯನಿರ್ವಹಿಸುತ್ತಿರುವ ನಾಗರಿಕರು, ಸಾಗಣೆದಾರರು ಮತ್ತಿತರ ಸಂಸ್ಥೆಗಳು ಕಿರುಕುಳು ಮತ್ತು ತೊಂದರೆಗಳನ್ನು ಎದುರಿಸುವುದನ್ನು ತಪ್ಪಿಸಬೇಕು ಎಂದು ಸಚಿವಾಲಯ ಪತ್ರದಲ್ಲಿ ವಿನಂತಿಸಿದೆ.