ನವದೆಹಲಿ: ಜುಲೈ 31ರೊಳಗೆ 51.6 ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯವಾಗಲಿದ್ದು, ಅದರಲ್ಲಿ ಈಗಾಗಲೇ 35.6 ಕೋಟಿಯನ್ನು ಪೂರೈಸಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಸುಪ್ರೀಂಕೋರ್ಟ್ ಗೆ ಹೇಳಿದೆ.
ಮಕ್ಕಳಿಗೆ ಲಭ್ಯವಿರುವ ಲಸಿಕೆ ಸ್ಥಿತಿಗತಿಯನ್ನು ನೀಡಿದ ಕೇಂದ್ರ ಸರ್ಕಾರ, 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ಪ್ರಯೋಗ ನಡೆಸಲು ಭಾರತ್ ಬಯೋಟೆಕ್ ಗೆ ಭಾರತೀಯ ಔಷದ ಮಹಾನಿಯಂತ್ರಕರು (ಡಿಸಿಜಿಐ) ಮೇ 12ರಂದು ಅನುಮತಿ ನೀಡಿದ್ದಾರೆ. ಈ ಪ್ರಯೋಗಕ್ಕೆ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿರುವುದಾಗಿ ಅಫಿಡವಿಟ್ ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ಡಿಎನ್‌ಎ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಜಿಡಸ್ ಕ್ಯಾಡಿಲಾ 12 ರಿಂದ 18 ವರ್ಷದೊಳಗಿನವರ ಪ್ರಾಯೋಗಿಕ ಪರೀಕ್ಷೆಯನ್ನು ಪೂರ್ಣಗೊಳಿಸಿದೆ ಮತ್ತು ಶಾಸನ ಬದ್ಧ ಅನುಮತಿಗಳಿಗೆ ಒಳಪಟ್ಟು, 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಆದಷ್ಟು ಬೇಗ ಲಭ್ಯವಾಗಬಹುದು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ದೇಶದಲ್ಲಿ ಕೋವಿಡ್-19 ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ಮಾತ್ರ 18 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರಿಗೆ ಲಸಿಕೆಗಾಗಿ ತುರ್ತು ಬಳಕೆಗೆ ಅವಕಾಶ ನೀಡಲಾಗಿದೆ .ಆದ್ದರಿಂದ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಲಸಿಕೆ ನೀಡಿಕೆಗೆ ಶಿಫಾರಸು ಮಾಡುತ್ತಿಲ್ಲ .ಸಂಪೂರ್ಣ ಅರ್ಹ ಜನಸಂಖ್ಯೆಗೆ ಲಸಿಕೆ ನೀಡುವಷ್ಟು ಲಸಿಕೆ ಲಭ್ಯವಿದೆ ಎಂದು ಸರ್ಕಾರ ಹೇಳಿದೆ.