ನವದೆಹಲಿ: 'ಕೋವಿಡ್-19' ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ದೇಶದ ಎಲ್ಲ ಬಡವರ್ಗದವರಿಗೂ ಉಚಿತ ಪಡಿತರ ನೀಡುವ ಕೇಂದ್ರ ಸರ್ಕಾರದ 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಯೋಜನೆಯನ್ನು ದೇಶದಾದ್ಯಂತ ಜುಲೈ 31ರೊಳಗೆ ಅನುಷ್ಠಾನಗೊಳಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕರ್ಫ್ಯೂ ಮತ್ತು ಲಾಕ್‌ಡೌನ್‌ನಿಂದಾಗಿ ಪುನಃ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಆಹಾರ ಭದ್ರತೆ, ಮತ್ತಿತರ ಸೌಲಭ್ಯಗಳನ್ನು ನೀಡಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ಮೂವರು ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠ, ಈ ನಿರ್ದೇಶನಗಳನ್ನು ನೀಡಿದೆ.
'ಈ ಯೋಜನೆಗಳ ಪ್ರಯೋಜನ ಪಡೆಯುವ ದೃಷ್ಟಿಯಿಂದ ಅಸಂಘಟಿತ ಕಾರ್ಮಿಕರ ವಲಯದವರ ನೋಂದಣಿ ಮಾಡಿಸಿಕೊಳ್ಳುವುದಕ್ಕಾಗಿ ರಾಷ್ಟ್ರೀಯ ಮಾಹಿತಿ ಕೇಂದ್ರದ(ಎನ್‌ಐಸಿ) ನೆರವಿನೊಂದಿಗೆ ಒಂದು ಜಾಲತಾಣ (ವೆಬ್ ಪೋರ್ಟಲ್) ಅಭಿವೃದ್ಧಿಪಡಿಸುವಂತೆಯೂ ನ್ಯಾಯಪೀಠ ಕೇಂದ್ರಕ್ಕೆ ನಿರ್ದೇಶನ ನೀಡಿತು.
ಆಯಾ ರಾಜ್ಯಗಳಲ್ಲಿ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಮುಂದುವರಿಯುವವರೆಗೆ, ವಲಸೆ ಕಾರ್ಮಿಕರಿಗಾಗಿ 'ಸಮುದಾಯ ಅಡಿಗೆ ಮನೆ'ಗಳನ್ನು ನಡೆಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಪೀಠ ನಿರ್ದೇಶಿಸಿದೆ. ಇದೇ ವೇಳೆ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ವಿತರಿಸಲು ಅನುಕೂಲವಾಗು ವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಪಡಿತರವನ್ನೂ ಪೂರೈಸುವಂತೆ ನ್ಯಾಯಪೀಠ ಸೂಚಿಸಿದೆ.
ಬಡ ವರ್ಗದವರ ಕಲ್ಯಾಣಕ್ಕಾಗಿ ರೂಪಿಸಿರುವ 'ಒಂದು ದೇಶ, ಒಂದು ಪಡಿತರ ಚೀಟಿ' ಯೋಜನೆಯಡಿ, ವಲಸೆ ಕಾರ್ಮಿಕರು ಕೆಲಸಕ್ಕಾಗಿ ಹೊರ ರಾಜ್ಯಗಳಿಗೆ ಹೋಗಿರುವ ಸಂದರ್ಭದಲ್ಲಿ ಕೆಲಸ ಮಾಡುವ ಸ್ಥಳದಲ್ಲೇ ಉಚಿತ ಪಡಿತರ ಪಡೆಯಬಹುದು. ಇಲ್ಲಿ ಪಡಿತರ ಚೀಟಿ ನೋಂದಣಿ ಮಾಡಿಸದಿದ್ದರೂ ಕಾರ್ಮಿಕರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ಪೀಠ ತಿಳಿಸಿದೆ.
ಬಡವರ ಕಲ್ಯಾಣಕ್ಕಾಗಿರುವ ಈ ಯೋಜನೆಯನ್ನು ಜುಲೈ 31ರೊಳಗೆ ಅನುಷ್ಠಾನಗೊಳಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ, ಸಾಮಾಜಿಕ ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್, ಹರ್ಷ್ ಮಂದರ್ ಮತ್ತು ಜಗದೀಪ್ ಓಕರ್ ಅರ್ಜಿ ಸಲ್ಲಿಸಿದ್ದರು.