ಕೊಚ್ಚಿ: ರಾಜ್ಯದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಕುರಿತು ನಡೆಸಿದ ಅಧ್ಯಯನವು ಸತತ 340 ಬ್ಲ್ಯಾಕ್ ಸ್ಪಾಟ್ ಗಳನ್ನು ಗುರುತಿಸಿದೆ. ಈ ಪೈಕಿ 238 ಸ್ಪಾಟ್ ಗಳು ಹೆಚ್ಚಿನ ಅಪಾಯ ಮತ್ತು 102 ಮಧ್ಯಮ ಅಪಾಯ ಹೊಂದಿರುವುದಾಗಿದೆ. ಕಳೆದ ಮೂರು ವರ್ಷಗಳಲ್ಲಿ ಈ ಸ್ಥಳಗಳಲ್ಲಿ ಅಪಘಾತಗಳಲ್ಲಿ 1763 ಮಂದಿ ಜನರು ಸಾವನ್ನಪ್ಪಿದ್ದಾರೆ. ಸವಿವರ ಅಧ್ಯಯನ ನಡೆಸಿದ ಬಳಿಕ ರಸ್ತೆ ಸುರಕ್ಷತಾ ಪ್ರಾಧಿಕಾರ ಈ ವರದಿಯನ್ನು ಸಿದ್ಧಪಡಿಸಿದೆ.
ತಿರುವನಂತಪುರಂ ಜಿಲ್ಲೆಯಲ್ಲಿ ಅತಿ ಹೆಚ್ಚು ಇಂತಹ ಅಪಾಯಕಾರಿ ಸ್ಪಾಟ್ ಗಳಿವೆ. ತಿರುವನಂತಪುರವೊಂದರಲ್ಲೇ 65 ಬ್ಲ್ಯಾಕ್ ಸ್ಪಾಟ್ ಪ್ರದೇಶಗಳಿವೆ. ಇತರ ಜಿಲ್ಲೆಗಳಾದ ಎರ್ನಾಕುಳಂ 58, ಕೊಲ್ಲಂ 56, ಆಲಪ್ಪುಳ 51, ತ್ರಿಶೂರ್ 36, ಕೋಝಿಕ್ಕೋಡ್ 25, ಕೊಟ್ಟಾಯಂ 18, ಮಲಪ್ಪುರಂ 13, ಪತ್ತನಂತಿಟ್ಟು 11, ಪಾಲಕ್ಕಾಡ್ ನಾಲ್ಕು, ವಯನಾಡ್, ಇಡುಕ್ಕಿ ಮತ್ತು ಕಣ್ಣೂರು ತಲಾ ಒಂದು ಎಂಬಂತೆ ಅಪಘಾತ ಕೇಂದ್ರಗಳಿದ್ದು ಕಾಸರಗೋಡಿನ ಉಲ್ಲೇಖ ನೀಡಲಾಗಿಲ್ಲ.
ಗುರುತಿಸಲಾದ ಅತಿ ತೀವ್ರ ಅಪಘಾತ ಕೇಂದ್ರಗಳ 238 ರಸ್ತೆಗಳಲ್ಲಿ ಹೆಚ್ಚಿನ ಅಪಾಯ ಗುರುತಿಸಲಾಗಿದ್ದು, 159 ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲ್ಲಿವೆ, 51 ರಾಜ್ಯ ಸರ್ಕಾರ ಮತ್ತು 28 ಸ್ಥಳೀಯಾಡಳಿತಗಳ ಸುಪರ್ಧಿಯ ರಸ್ತೆಗಳಾಗಿವೆ.
ಬ್ಲ್ಯಾಕ್ ಸ್ಪಾಟ್ ಗಳೆಂದು ಗುರುತಿಸಲ್ಪಟ್ಟ ಪ್ರದೇಶಗಳಲ್ಲಿನ ಅಪಾಯವನ್ನು ಕಡಿಮೆ ಮಾಡಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಏಜೆನ್ಸಿಗಳಿಗೆ ನಿರ್ದೇಶಿಸಲಾಗಿದೆ.