ನವದೆಹಲಿ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡಿರುವ ಬಗ್ಗೆ ಮರುಚಿಂತನೆ ನಡೆಸಬಹುದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಭಾನುವಾರ ಕಾಂಗ್ರೆಸ್ ಅನ್ನು ಪ್ರಶ್ನಿಸಿದ್ದಾರೆ.
ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವ ಸಮಯ ಮುಗಿದಿದೆ. 370ನೇ ವಿಧಿ ಹಿಂತೆಗೆದುಕೊಳ್ಳುವ ಹೇಳಿಕೆ ಕುರಿತು ಕಾಂಗ್ರೆಸ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ಸಹಯೋಗದೊಂದಿಗೆ ಭಾರತದ ವಿರುದ್ಧ ವಿಷಕಾರುತ್ತಿರುವ ಕಾಂಗ್ರೆಸ್ ದಿಗ್ವಿಜಯ್ ಸಿಂಗ್ ಹೇಳಿದಂತೆ 370ನೇ ವಿಧಿಯನ್ನು ಪುನಃಸ್ಥಾಪಿಸಲು ಬಯಸುತ್ತದೆಯೇ? ಮೌನದ ಸಮಯ ಮುಗಿದಿದೆ. ದಯವಿಟ್ಟು ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ ಎಂದು ಟ್ವೀಟ್ ಮಾಡಿದ್ದಾರೆ.
"ಆರ್ಟಿಕಲ್ 370 ರದ್ದತಿ ಹಾಗೂ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದು ಅತ್ಯಂತ ಬೇಸರದ ಸಂಗತಿ ಕಾಂಗ್ರೆಸ್ ಪಕ್ಷ ಈ ಬಗ್ಗೆ ಖಂಡಿತವಾಗಿಯೂ ಮರುಪರಿಶೀಲನೆ ನಡೆಸಲಿದೆ ಎಂದು ದಿಗ್ವಿಜಯ್ ಸಿಂಗ್ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದೇ ವೇಳೆ ರವಿಶಂಕರ್ ಪ್ರಸಾದ್ ಮತ್ತೊಂದು ಟ್ವೀಟ್ ಮಾಡಿ, ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ದೂರದ ಭಾಗಗಳಲ್ಲಿಯೂ ಸಹ ಕೊರೋನಾ ವಿರುದ್ಧ ವ್ಯಾಕ್ಸಿನೇಷನ್ ನಡೆಯುತ್ತಿರುವುದು ಈ ಪ್ರದೇಶದ ಜನರ ಪರವಾದ ಉತ್ತಮ ಆಡಳಿತದ ಸಂಕೇತವಾಗಿದೆ ಎಂದು ಟ್ವೀಟಿಸಿದ್ದಾರೆ.