ನವದೆಹಲಿ; ಪೂರ್ಣ ಪ್ರಮಾಣದ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸುವುದಕ್ಕೆ ಭಾರತಾದ್ಯಂತ 38 ವಿಶ್ವವಿದ್ಯಾಲಯಗಳಿಗೆ, ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಅನುಮತಿ ನೀಡಿದೆ.
ಈ ವಿಶ್ವವಿದ್ಯಾಲಯಗಳು ಯುಜಿಸಿಯಿಂದ ಪೂರ್ವಾನುಮತಿ ಪಡೆಯದೆಯೇ ತಮ್ಮ ವ್ಯಾಪ್ತಿಯಲ್ಲಿನ ವಿಷಯಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಕೋರ್ಸ್‌ನ್ನು ಪ್ರಾರಂಭಿಸಬಹುದಾಗಿದೆ. ಯುಜಿಸಿಯ ದೂರ ಶಿಕ್ಷಣ ನಿರ್ದೇಶನಾಲಯದ ಶಿಫಾರಸಿನ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಯುಜಿಸಿ ಶನಿವಾರ ತಿಳಿಸಿದೆ.
38 ವಿಶ್ವವಿದ್ಯಾಲಯಗಳಲ್ಲಿ 15 ಡೀಮ್ಡ್ ವಿವಿಗಳು, 13 ರಾಜ್ಯ ವಿವಿಗಳು, 3 ಕೇಂದ್ರೀಯ ವಿವಿಗಳು ಮತ್ತು 7 ಖಾಸಗಿ ವಿವಿಗಳು ಸೇರಿವೆ.
ಕೇಂದ್ರಿಯ ವಿವಿಯಾದ ಜಾಮೀಯಾ ಮಿಲಿಯಾ ಇಸ್ಲಾಮಿಯಾ ಶಿಕ್ಷಣ ಮತ್ತು ಸಾರ್ವಜನಿಕ ಆಡಳಿತದಲ್ಲಿ ಎಂ.ಎ ಆನ್‌ಲೈನ್ ಕೋರ್ಸ್‌ನ್ನು ಆರಂಭಿಸುತ್ತಿದೆ. ಜವಾಹರ ಲಾಲ್ ನೆಹರು ವಿವಿ ಸಂಸ್ಕೃತ ಎಂ.ಎ, ಯುನಿವರ್ಸಿಟಿ ಆಫ್ ಜಮ್ಮು ಎಂ.ಕಾಂ ಮತ್ತು ಎಂ.ಎ ಇಂಗ್ಲಿಷ್, ಮಿಜೋರಾಮ್ ವಿವಿ ನಾಲ್ಕು ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸುತ್ತಿವೆ.
ಖಾಸಗಿ ವಿವಿಗಳಾದ ನಾರ್ಸಿ ಮೋಂಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಸ್ಟಡೀಸ್ ಬಿ.ಕಾಂ ಮತ್ತು ಬಿಬಿಎ ನ್ನು ಆನ್‌ಲೈನೀಕರಣಗೊಳಿಸುತ್ತಿದೆ. ಇನ್ನು ಜೈನ್ ವಿವಿ ಕೂಡ ಆರು ಕೋರ್ಸ್‌ಗಳನ್ನು ಆನ್‌ಲೈನ್ ಮಾಡುತ್ತಿದ್ದು ಇದರಲ್ಲಿ ಎಂ.ಎ ಇಂಗ್ಲಿಷ್ ಮತ್ತು ಎಂ.ಎ ಅರ್ಥಶಾಸ್ತ್ರ ಹಾಗೂ ಬಿ.ಕಾಂ, ಬಿಬಿಯ ಸೇರಿವೆ.
'ಕೊರೊನಾ ಹಿನ್ನೆಲೆಯಲ್ಲಿ ಯುಜಿಸಿ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸುವುದಕ್ಕೆ ಅರ್ಜಿಗಳನ್ನು ಆಹ್ವಾನಿಸಿತ್ತು. ಇದಕ್ಕಾಗಿ ದೂರ ಶಿಕ್ಷಣದ ನಿಯಮಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸುವುದಕ್ಕೆ ಬೇಕಾಗಿರುವ ಮಾನದಂಡಗಳನ್ನು ಪರಿಶೀಲಿಸಲಾಗಿತ್ತು' ಎಂದು ಯುಜಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಲಾಕ್‌ಡೌನ್ ಆಗಿ ಶಾಲಾ-ಕಾಲೇಜು ತರಗತಿಗಳು ಬಹುತೇಕ ಸ್ಥಗಿತಗೊಂಡಿದ್ದವು. ಇದರಿಂದ ಆನ್‌ಲೈನ್ ತರಗತಿಗಳು ಅನಿವಾರ್ಯವಾಗಿದೆ. ಹೀಗಾಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲ ಶಿಕ್ಷಣ ಸಂಸ್ಥೆಗಳು ಇದೀಗ ಸಂಪೂರ್ಣ ಆನ್‌ಲೈನ್ ಕೋರ್ಸ್‌ಗಳನ್ನೇ ಆರಂಭಿಸಲು ಮುಂದಾಗಿವೆ.