ನವದೆಹಲಿ: ಕೋವಿಡ್ ಮೂರನೇ ಅಲೆ ವೇಳೆ ಮಕ್ಕಳು ಅತ್ಯಧಿಕ ಸಂಖ್ಯೆಯಲ್ಲಿ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ವೈದ್ಯಕಿಯ ನಿಯತಕಾಲಿಕೆ ಲ್ಯಾನ್ಸೆಟ್ ಮಕ್ಕಳು ಹಾಗೂ ಪಾಲಕರಿಗೆ ಕೊಂಚ ನಿರಾಳತೆ ನೀಡಿದೆ. ಸಂಭಾವ್ಯ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬುದಕ್ಕೆ ಈವರೆಗೆ ಗಣನೀಯ ಪುರಾವೆ ಸಿಕ್ಕಿಲ್ಲ ಎಂದು ಲ್ಯಾನ್ಸೆಟ್ ಕೋವಿಡ್ 19 ಭಾರತೀಯ ಕಾರ್ಯಪಡೆ ವರದಿ ಹೇಳಿದೆ. ದೇಶದ ಪ್ರಮುಖ ಮಕ್ಕಳ ತಜ್ಞರೊಂದಿಗೆ ವಿಸತ ಸಮಾಲೋಚನೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ.
ಭಾರತದಲ್ಲಿ ಮಕ್ಕಳಲ್ಲಿ ಕೋವಿಡ್ ಸ್ಥಿತಿಗತಿಯನ್ನೂ ಸಮಗ್ರವಾಗಿ ಅಧ್ಯಯನ ಮಾಡಲಾಗಿದೆ. ಭಾರತದಲ್ಲಿ ಸೋಂಕಿತರಾದ ಬಹುತೇಕ ಮಕ್ಕಳಲ್ಲಿ ಸೋಂಕಿನ ಲಕ್ಷಣಗಳಿರಲಿಲ್ಲ. ಹಲವರಿಗೆ ಲು ಲಕ್ಷಣಗಳು ಇದ್ದವು. ಕೆಲವರಲ್ಲಿ ಉಸಿರಾಟದ ತೊಂದರೆ ಸಹಿತ ಜ್ವರ, ಅತಿಸಾರ, ವಾಂತಿ, ಹೊಟ್ಟೆನೋವು ಇನ್ನಿತರ ಸಮಸ್ಯೆಗಳಿದ್ದವು. ವಯಸ್ಕರಿಗೆ ಹೋಲಿಸಿದರೆ ಈ ಲಕ್ಷಣದ ತೀವ್ರತೆ ಕಡಿಮೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಧ್ಯಯನದಲ್ಲಿ ಕಂಡುಬಂದಿದ್ದೇನು?
ತಮಿಳುನಾಡು, ಕೇರಳ, ಮಹಾ ರಾಷ್ಟ್ರ, ದೆಹಲಿ ಎನ್ಸಿಆರ್ ಪ್ರದೇಶದ 10 ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 10 ವರ್ಷದ ಒಳಗಿನ 2600 ಮಕ್ಕಳ ವೈದ್ಯಕಿಯ ಅಂಕಿ&ಅಂಶಗಳನ್ನು ಆಧರಿಸಿ ಅಧ್ಯಯನ ನಡೆಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾದ ಶೇ. 9 ಮಕ್ಕಳಲ್ಲಿ ಮಾತ್ರ ಕರೊನಾ ಲಕ್ಷಣಗಳು ಕಂಡುಬಂದಿವೆ. ಮಕ್ಕಳಲ್ಲಿ ಮರಣ ಪ್ರಮಾಣ ಶೇ. 2.4 ಇದ್ದು, ಇವರಲ್ಲಿ ಶೇ. 40ಕ್ಕೂ ಅಧಿಕ ಮಕ್ಕಳು ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಈವರೆಗೆ ದೇಶದಲ್ಲಿ ಸರಾಸರಿ ಒಂದು ಲಕ್ಷ ಸೋಂಕಿತ ಮಕ್ಕಳಲ್ಲಿ ಕೇವಲ 500 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಲ್ಯಾನ್ಸೆಟ್ ಉಲ್ಲೇಖಿಸಿದೆ.