ನವದೆಹಲಿ: ತಜ್ಞರ ತಂಡ ಶಿಫಾರಸಿನ ನಂತರ ಕೇಂದ್ರ ಆರೋಗ್ಯ ಸಚಿವಾಲಯವು ಗರ್ಭಿಣಿ ಮಹಿಳೆಯರಿಗೆ ಶೀಘ್ರದಲ್ಲೇ ಕೋವಿಡ್ -19 ಲಸಿಕೆ ನೀಡಲು ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಹಾಲುಣಿಸುವ ಮಹಿಳೆಯರಿಗೂ ಕೊರೋನಾ ವ್ಯಾಕ್ಸಿನೇಷನ್ಗಾಗಿ ಅವಕಾಶ ನೀಡಲಾಗಿದೆ. ಆದರೆ ಸುರಕ್ಷತಾ ಮಾಹಿತಿಯ ಕೊರತೆಯಿಂದಾಗಿ ಗರ್ಭಿಣಿ ಮಹಿಳೆಯರಿಗೆ ಸರ್ಕಾರ ಲಸಿಕೆ ನೀಡಲು ಶಿಫಾರಸು ಮಾಡಿಲ್ಲ.
ರೋಗನಿರೋಧಕ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ನೀಡುವ ಶಿಫಾರಸು ಅನುಸರಿಸಿ ಗರ್ಭಿಣಿ ಮಹಿಳೆಯರಿಗೆ ಕೋವಿಡ್ ವ್ಯಾಕ್ಸಿನೇಷನ್ ಅನುಮತಿಸುವ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗರ್ಭಧಾರಣೆಯ ಎಲ್ಲಾ ಹಂತಗಳಲ್ಲಿ ಮಹಿಳೆಯರಿಗೆ ಕೊರೋನಾದಿಂದಾಗುವ ಅಪಾಯದ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ ಗರ್ಭಿಣಿಯರಿಗೆ ವ್ಯಾಕ್ಸಿನೇಷನ್ ಆಯ್ಕೆ ಮಾಡುವ ಆಯ್ಕೆಯನ್ನು ನೀಡುವುದರ ಬಗ್ಗೆ ತಿರ್ಮಾನಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ತಜ್ಞರ ತಂಡಗಳು ಸೂಚಿಸಿದಂತೆ, ಲಸಿಕೆಗಳು ಸಾಂಪ್ರದಾಯಿಕವಾಗಿ ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತವೆಂದು ಕಂಡುಬಂದಿರುವುದರಿಂದ ತಜ್ಞರ ತಂಡ ಕೋವಿಶೀಲ್ಡ್ ಬದಲಿಗೆ ಕೋವ್ಯಾಕ್ಸಿನ್ ಅನ್ನು ಶಿಫಾರಸು ಮಾಡಬಹುದು ಎಂದು ಆರೋಗ್ಯ ಸಚಿವಾಲಯದ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಸೋಂಕಿನಿಂದ ಉಂಟಾಗುವ ಅಪಾಯಗಳು, ವ್ಯಾಕ್ಸಿನೇಷನ್‌ನ ಪ್ರಯೋಜನಗಳ ಕುರಿತಾದ ಮಾಹಿತಿಯೊಂದಿಗೆ ಕೋವಿಡ್ 19 ಲಸಿಕೆಗಳನ್ನು ನೀಡಬೇಕೆಂದು ಎನ್‌ಟಿಎಜಿಐ ಮೇ 28ರ ಸಭೆಯಲ್ಲಿ ಹೇಳಿತ್ತು.