ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ಎರಡನೇ ಅಲೆಯನ್ನು ನಿಯಂತ್ರಿಸಲು ಈಗ ಕೈಗೊಳ್ಳುತ್ತಿರುವ ನಿರ್ಬಂಧಗಳು ಮತ್ತು ಕ್ರಮಗಳನ್ನು ಎಚ್ಚರಿಕೆಯಿಂದ ಕೈಬಿಟ್ಟರೆ, ನಿರ್ಬಂಧ ಸಡಿಲಿಸಿದರೆ ಮೂರನೇ ಕೋವಿಡ್ -19 ಅಲೆಯು ದೇಶವನ್ನು ಅಪ್ಪಳಿಸಿ ಇನ್ನಷ್ಟು ಸಾವು ನೋವುಗಳನ್ನುಂಟುಮಾಡಬಹುದು ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ, ನೀತಿ ಆಯೋಗದ ಸದಸ್ಯ ವಿ ಕೆ ಪೌಲ್ ಅವರು ದೇಶದ ಕೋವಿಡ್-19 ರಾಷ್ಟ್ರೀಯ ಕಾರ್ಯಪಡೆಯ ಮುಂದಾಳತ್ವ ವಹಿಸಿದ್ದು ವೈರಸ್ ನ ಪ್ರಭಾವ ದೇಶದಲ್ಲಿ ಇನ್ನೂ ಕಡಿಮೆಯಾಗಿಲ್ಲ, ಆದರೆ ಅದರ ಹರಡುವಿಕೆಯನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಲ್ಲಿ ಮಾಡಿದಂತೆ ಬೇಕಾಬಿಟ್ಟಿಯಾಗಿ ವರ್ತಿಸಿದರೆ ಮತ್ತೆ ಕೋವಿಡ್ ಮೂರನೇ ಅಲೆಯು ದೇಶದಲ್ಲಿ ಎದ್ದು ಇನ್ನಷ್ಟು ಕಠಿಣ ಪರಿಸ್ಥಿತಿಗೆ ಹೋಗಬಹುದು ಎಂದು ಅವರು ಹೇಳಿದ್ದಾರೆ. ಕೋವಿಡ್-19 ನಿಬಂಧನೆಗಳನ್ನು ದೇಶದ ನಾಗರಿಕರು ಕಡ್ಡಾಯವಾಗಿ ಮುಂದಿನ ದಿನಗಳಲ್ಲಿ ಪಾಲಿಸಲೇಬೇಕು. ಆಗ ಮಾತ್ರ ನಿಧಾನವಾಗಿ ದೇಶದಿಂದ ಕೋವಿಡ್ ಅಲೆ ದೂರವಾಗಬಹುದು ಎಂದಿದ್ದಾರೆ.
ಮೇ 7ನೇ ತಾರೀಕಿನಿಂದ ದೇಶದಲ್ಲಿ ಪ್ರತಿದಿನದ ಕೋವಿಡ್ ಕೇಸಿನಲ್ಲಿ ಶೇಕಡಾ 68ರಷ್ಟು ಇಳಿಕೆಯಾಗಿದೆ. ದೇಶದಲ್ಲಿ ಸುಮಾರು 377 ಜಿಲ್ಲೆಗಳಲ್ಲಿ ಶೇಕಡಾ 5ಕ್ಕಿಂತ ಕಡಿಮೆ ಕೊರೋನಾ ಪಾಸಿಟಿವ್ ವರದಿಯಾಗಿದ್ದು, 257 ಜಿಲ್ಲೆಗಳಲ್ಲಿ ಪ್ರತಿದಿನ ಸುಮಾರು 100 ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ, ಅಂದರೆ ಭಾರತದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದರ್ಥ ಎಂದು ಹೇಳಿದ್ದಾರೆ.
ಆದರೆ ಕೊರೋನಾ ಸೋಂಕಿನ ಇಳಿಕೆ ಮತ್ತು ನಿಯಂತ್ರಣ ಏಕಾಏಕಿ ಆಗುವುದಿಲ್ಲ, ವೈರಸ್ ಹಬ್ಬುವುದಕ್ಕೆ ನಾವು ಸುಲಭವಾಗಿ ದಾರಿ ಮಾಡಿಕೊಡಬಾರದು. ಕೊರೋನಾ ಸೋಂಕಿನ ಗರಿಷ್ಠ ಸಂಖ್ಯೆ ಇಳಿಮುಖವಾಗುವಾಗ ಕಳೆದ ಜನವರಿ ತಿಂಗಳಲ್ಲಿ ನಾವು ವರ್ತಿಸಿದ ರೀತಿ ವರ್ತಿಸಿದರೆ ಮತ್ತೆ ವೈರಸ್ ಪುಟಿದೇಳುತ್ತದೆ. ಹೀಗಾಗಿ ಸಾಮಾನ್ಯ ಪ್ರಜ್ಞೆಯಿಂದ ನಾವು ನಾಗರಿಕರು ವರ್ತಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ಮೂರನೇ ಅಲೆಯು ನಿಜಕ್ಕೂ ಅಪಾಯಕಾರಿಯಾಗಿದ್ದು ಇನ್ನಷ್ಟು ಸಂಖ್ಯೆಯ ಜನರು ಸೋಂಕಿಗೆ, ಸಾವಿಗೆ ತುತ್ತಾಗಬಹುದು ಎಂದು ಅನೇಕ ತಜ್ಞರು ಹೇಳಿದ್ದಾರೆ, ಅದರ ಸಮಯ ಮತ್ತು ತೀವ್ರತೆಯನ್ನು ಊಹಿಸುವುದು ಕಷ್ಟ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.