ಬೆಂಗಳೂರು: ಅರ್ಧ ತಾಸು 60 ಜಾಹೀರಾತು ನೋಡಿದ್ರೆ ದಿನಕ್ಕೆ 240 ರೂ. ಸಂಪಾದನೆ. ತಿಂಗಳಿಗೆ 7200 ರೂ. ಕೂತಲ್ಲಿ ಸಂಬಳ. ವರ್ಷಕ್ಕೆ 86,400 ರೂ. ಯಾರನ್ನಾದರೂ ಸದಸ್ಯರನ್ನಾಗಿ ಈ ಸ್ಕೀಮ್ ಗೆ ಸೇರಿಸಿದ್ರೆ 4400 ರೂ. ಬೋನಸ್. ಹತ್ತು ಮಂದಿಯನ್ನು ಸೇರಿಸಿದರೂ ಸಾಕು. ಇದಕ್ಕೆ ಕೇವಲ 1 ಸಾವಿರ ರೂ. ಪಾವತಿಸಿ ಸದಸ್ಯತ್ವ ಪಡೆದರೆ ಸಾಕು ! ಇಂತದ್ದೊಂದು ಬ್ಲೇಡ್ ಸ್ಕೀಮ್ ಪರಿಚಯಿಸಿ ನಾಲ್ಕು ಲಕ್ಷ ಜನರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದ್ದ ಜಾಲಿಲೈಫ್ ಸ್ಟೈಲ್.ಕಾಮ್ ವಂಚನೆಯನ್ನು ಸಿಸಿಬಿ ಪೊಲೀಸರು ಬಯಲಿಗೆ ಎಳೆದಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಆಗಬಹುದಾದ ದೊಡ್ಡ ಅನಾಹುತವನ್ನು ಆರಂಭದಲ್ಲಿ ತಪ್ಪಿಸಿದ್ದಾರೆ.
ಕೇರಳ ಮೂಲದ ಕೆ.ವಿ. ಜಾನಿ ಬಂಧಿತ ಆರೋಪಿ. ವೆಸ್ಟ್ ಆಫ್ ಕೋರ್ಡ್ ನಲ್ಲಿ ವಾಸವಾಗಿದ್ದ ಈತ ಕೇರಳದ ಎರ್ನಾಕುಲಂನ ಕುಲಿಮಲೈ ನಿವಾಸಿ. ಈತನಿಂದ ಹಲವಾರು ದಾಖಲೆಗಳನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಕೆ.ವಿ. ಜಾನಿ ಜಾಲಿಲೈಫ್ ಸ್ಟೈಲ್.ಕಾಮ್ ನ ನಿರ್ದೇಶಕ. ಮೆ. ಜೆಎಎ ಲೈಫ್ ಸ್ಟೈಲ್ ಇಂಡಿಯಾ ಪ್ರೆ. ಲಿ. ಎಂಬ ಕಂಪನಿಯನ್ನು ಬಸವೇಶ್ವರನಗರದ ಕೆಎಚ್ ಬಿ ಕಾಲೋನಿಯಲ್ಲಿ ನೋಂದಣಿ ಮಾಡಿಸಿದ್ದ.
ಈ ಕಂಪನಿ ಹೆಸರಿನಲ್ಲಿ ಕಚೇರಿ ತೆರೆದಿದ್ದ ಜಾನಿ, jaalifestyle.com ಎಂಬ ಅಂತರ್ಜಾಲ ತಾಣವನ್ನು ತೆರೆದು 2021 ರಲ್ಲಿ ಜಾಹೀರಾತು ಪ್ರಾಜೆಕ್ಟ್ ಪರಿಚಯಿಸಿದ್ದ. ಈ ಕುರಿತು ಹಲವಾರು ಕಂಪನಿಗಳ ಜಾಹೀರಾತು ಪ್ರದರ್ಶನ ಕುರಿತು ಒಡಂಬಡಿಕೆ ಮಾಡಿಕೊಂಡಿದ್ದ.
ಮೆ. ಜೆಎಎ ಲೈಫ್ ಸ್ಟೈಲ್ ಕಂಪನಿಯ ಜಾಹೀರಾತು ಪ್ರಾಜೆಕ್ಟ್ ಹೆಸರಿನಲ್ಲಿ ಸಾರ್ವಜನಿಕರಿಂದ 1009 ರೂ. ಸದಸ್ಯತ್ವ ಸಂಗ್ರಹ ಮಾಡುತ್ತಿತ್ತು. ಸಾಮಾಜಿಕ ಜಾಲ ತಾಣದಲ್ಲಿ ಲೈವ್, ಪ್ರಚಾರದ ಮೂಲಕ ಕೇವಲ 9 ತಿಂಗಳಲ್ಲಿ ನಿರೀಕ್ಷೆಗೂ ಮೀರಿ ಸದಸ್ಯತ್ವ ಮಾಡಿಸಿದ್ದರು. ಬರೋಬ್ಬರಿ 4 ಲಕ್ಷ ಮಂದಿ ಸದಸ್ಯತ್ವ ಪಡೆದು ತಲಾ ಒಂದು ಸಾವಿರ ರೂ. ನೋಂದಣಿ ಶುಲ್ಕ ಪಾವತಿಸಿದ್ದರು. ಈ ಮೂಲಕ ಸುಮಾರು ನಾಲ್ಕು ಕೋಟಿಗೂ ಅಧಿಕ ಹಣವನ್ನು ಜಾನಿ ಸದಸ್ಯತ್ವದಿಂದಲೇ ಸಂಗ್ರಹಿಸಿದ್ದ.
ತಿಂಗಳಿಗೆ ಕೂತಲ್ಲೇ ಏಳು ಸಾವಿರ ಬದಲಿಗೆ 20 ಸಾವಿರ ದುಡಿಯುವ ಆಸೆಗೆ ಬಿದ್ದು ಮೂರು ಮತ್ತು ನಾಲ್ಕು ಸದಸ್ಯತ್ವ ಪಡೆದಿದ್ದಾರೆ. ಇನ್ನೂ ಕೆಲವರು ಹತ್ತು ಸದಸ್ಯತ್ವ ಪಡೆದು ದಿನಕ್ಕೆ 2400 ರೂ. ಗಳಿಸುವ ದುರಾಸೆಗೆ ಬಿದ್ದಿದ್ದಾರೆ. ಜನರ ಹಣ ಗಳಿಕೆ ಆಸೆಯನ್ನು ಬಂಡವಾಳ ಮಾಡಿಕೊಂಡ ಜಾನಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಬಹುತೇಕರಿಗೆ ಹಣ ಪಾವತಿ ಮಾಡಿರಲಿಲ್ಲ.
ಅರ್ಧ ತಾಸು 60 ಜಾಹೀರಾತು ನೋಡಲು, ಅಂತರ್ಜಾಲ ಹಾಕಿಸಿಕೊಂಡವರು ಕೆಲವರಾದರೆ ಇದಕ್ಕಾಗಿ ಕೆಲವರು ಹೊಸ ಮೊಬೈಲ್ ಖರೀದಿಸಿದ್ದಾರೆ. ಆದರೆ ಜಾನಿ ಮಾತ್ರ ಜಾಲಿಲೈಫ್ ಸ್ಟೈಲ್ ಹೆಸರಿನಂತೆ ಜನರ ದುಡ್ಡಲ್ಲಿ ಜಾಲಿ ಲೈಫ್ ಲೀಡ್ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ಜಾನಿಯನ್ನು ಬಂಧಿಸಿ ಜಾಲಿಲೈಫ್ ಸ್ಟೈಲ್ ಕಚೇರಿಗೆ ಬೀಗ ಜಡಿದಿದ್ದಾರೆ.
ಪ್ರಾಮಾಣಿಕವಾಗಿ ದುಡಿಯುವ ಹಾದಿಯ ಬಗ್ಗೆ ಜನರು ನಂಬುವುದಿಲ್ಲ. ಆದರೆ, ಅತಿ ಸುಲಭವಾಗಿ ದುಡಿಮೆ ಮಾಡುವ ಹಾದಿ ಹುಡುಕುವ ಮಂದಿ ಬ್ಲೇಡ್ ಸ್ಕೀಮ್ ಗಳ ಅಮಿಷೆಗಳಿಗೆ ಒಳಗಾಗಿ ನಾಮ ಹಾಕಿಸಿಕೊಳ್ಳುವ ಜನರಿಗೆ ಕಡಿಮೆಯಿಲ್ಲ. ಈ ಹಿಂದೆ 250 ರೂ.ಗೆ ಸ್ಮಾರ್ಟ್ ಪೋನ್ ಮೊಬೈಲ್ ಕೊಡುತ್ತೇವೆ ಎಂದು ಪ್ರಧಾನಿ ಮೋದಿ ಹೆಸರನ್ನು ಬಳಸಿಕೊಂಡು ದೇಶದಲ್ಲಿ ಕೋಟ್ಯಂತರ ಮಂದಿಗೆ ಮೋಸ ಮಾಡಲಾಗಿತ್ತು.
ರಾಜ್ಯದಲ್ಲಿ ಈಗಾಗಲೇ ಐಎಂಎ ಗೋಲ್ಡ್, ಗ್ರೀನ್ ಬಡ್ಸ್, ಅಗ್ರಿಗೋಲ್ಡ್, ಕಣ್ವ ಹೀಗೆ ಸರಣಿ ಬ್ಲೇಡ್ ಸ್ಕೀಮ್ ಗಳಿಂದ ಜನರು ಕೋಟ್ಯಂತರ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಷ್ಟಾಗಿಯೂ ನಾನಾ ಸೋಗಿನಲ್ಲಿ ಬ್ಲೇಡ್ ಸ್ಕೀಮ್ ಗಳನ್ನು ವಂಚಕರು ಪರಿಚಯಿಸಿ ಬಡವರ ರಕ್ತ ಹೀರುತ್ತಿದ್ದಾರೆ.