ನವದೆಹಲಿ: 'ದೇಶದಲ್ಲಿ ಈವರೆಗೆ ಒಟ್ಟು 40,845 ಕಪ್ಪು ಶಿಲೀಂಧ್ರ ಅಥವಾ ಮ್ಯೂಕರ್‌ಮೈಕೋಸಿಸ್ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 31,344 ರೈನೋಸೆರೆಬ್ರಲ್ (ಮೂಗಿನ ಭಾಗದ) ಸ್ವರೂಪದ್ದಾಗಿವೆ . ಸೋಂಕಿನಿಂದ 3,129 ಮಂದಿ ಮೃತಪಟ್ಟಿದ್ದಾರೆ,' ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಸೋಮವಾರ ತಿಳಿಸಿದ್ದಾರೆ.
ಕೋವಿಡ್‌ಗೆ ಸಂಬಂಧಿಸಿದಂತೆ 29ನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಹರ್ಷ ವರ್ಧನ್, ಬ್ಲಾಕ್ ಫಂಗಸ್ ಕಾಯಿಲೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ಬಿಚ್ಚಿಟ್ಟರು. ಒಟ್ಟು ಪ್ರಕರಣಗಳಲ್ಲಿ 34,940 ರೋಗಿಗಳು ಕೋವಿಡ್ ಕಾರಣದಿಂದ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿಸಿದರು. 26,187 ಮಧುಮೇಹ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ, 21,523 ಮಂದಿ ಸ್ಟೀರಾಯ್ಡ್ ಕಾರಣದಿಂದ ಬ್ಲಾಕ್ ಫಂಗಸ್ ಬಾಧೆಗೆ ಒಳಗಾಗಿದ್ದಾರೆ ಎಂದು ಹೇಳಿದರು.
ಒಟ್ಟು ಸಂಖ್ಯೆಯಲ್ಲಿ 13,083 ರೋಗಿಗಳು 18-45 ವರ್ಷ ವಯಸ್ಸಿನವರಾಗಿದ್ದಾರೆ (ಶೇಕಡಾ 32), 17,464 ಜನರು 45-60 ವರ್ಷ ವಯಸ್ಸಿನವರಾಗಿದ್ದಾರೆ (ಶೇಕಡಾ 42), 10,082 (24 ಶೇಕಡಾ) ರೋಗಿಗಳು 60ವರ್ಷ ಮೇಲ್ಪಟ್ಟವರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕೋವಿಡ್ 19 ಲಸಿಕಾ ಅಭಿಯಾನದ ಕುರಿತು ಮಾತನಾಡಿದ ಹರ್ಷ ವರ್ಧನ್, 'ಭಾರತವು ಲಸಿಕಾ ಅಭಿಯಾನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಅಮೆರಿಕಕ್ಕಿಂತಲೂ ಭಾರತ ಹೆಚ್ಚು ಲಸಿಕೆಗಳನ್ನು ನೀಡಿದೆ. ಅಮೆರಿಕದಲ್ಲಿ 2020ರ ಡಿಸೆಂಬರ್ 14 ರಿಂದ ಕೋವಿಡ್ ಲಸಿಕೆ ನೀಡಲು ಆರಂಭಿಸಲಾಯಿತು. ಆದರೆ ಭಾರತದಲ್ಲಿ ಜನವರಿ 16 ರಿಂದ ಪ್ರಾರಂಭಿಸಲಾಯಿತು,' ಎಂದು ಅವರು ಹೇಳಿದರು.
ಸೋಮವಾರ ಬೆಳಿಗ್ಗೆ (8 ಗಂಟೆ ವರೆಗೆ) 32,36,63,297 ಡೋಸ್ ಲಸಿಕೆಗಳನ್ನು ದೇಶದ ವಿವಿಧ ಭಾಗಗಳ ಜನರಿಗೆ ನೀಡಲಾಗಿದೆ.