ನವದೆಹಲಿ: ದೇಶದಲ್ಲಿ ಇಲ್ಲಿಯವರೆಗೂ 40 ಕೋಟಿ ಜನರಿಗೆ ಕೋವಿಡ್-19ರ ಪರೀಕ್ಷೆ ನಡೆಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಲಾಗಿದೆ. ಜೂನ್ ತಿಂಗಳಲ್ಲಿ ನಿತ್ಯ ಸರಾಸರಿ 18 ಲಕ್ಷ ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಶನಿವಾರ ಮಾಹಿತಿ ನೀಡಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಥೆ, ದೇಶದಾದ್ಯಂತ ಶುಕ್ರವಾರದವರೆಗೆ 40,18,11,892 ಮಾದರಿಗಳನ್ನು ಪರೀಕ್ಷಿಸಲಾಗಿದೆ. 2021ರ ಜೂನ್ 1ರವರೆಗೆ ದೇಶದಲ್ಲಿ 35 ಕೋಟಿ ಕೋವಿಡ್-19 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ತಿಳಿಸಿದೆ.
'ದೇಶದಾದ್ಯಂತ ಈ ಪರೀಕ್ಷೆಗಳಿಗೆ ಬೇಕಾದ ಅಗತ್ಯ ಮೂಲಸೌಕರ್ಯವನ್ನು ಹೆಚ್ಚಿಸುವ ಮೂಲಕ, ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇದರಿಂದ ವೇಗವಾಗಿ ಮಾದರಿಗಳ ಪರೀಕ್ಷೆಗಳು ನಡೆಯುತ್ತಿವೆ. ಲಭ್ಯ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಲಾಗಿದೆ' ಎಂದು ಐಸಿಎಂಆರ್ ತಿಳಿಸಿದೆ.
ಐಸಿಎಂಆರ್ ನಿರ್ದೇಶಕ ಪ್ರೊ. ಬಲರಾಮ್ ಭಾರ್ಗವ್, 'ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಿಸಿರುವುದರಿಂದ ಸೋಂಕಿತರನ್ನು ಗುರುತಿಸಿ, ಪತ್ಯೇಕವಾಗಿರಿಸಲು ಅನುಕೂಲವಾಗಿದೆ. ಅಷ್ಟೇ ಅಲ್ಲ, ಕೋವಿಡ್ ಸೋಂಕಿತರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲೂ ಸಹಕಾರಿಯಾಗಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಥ ಹಲವು ಕ್ರಮಗಳಿಂದಾಗಿ ದೇಶದಲ್ಲಿ ಕೊರೊನಾ ಸೋಂಕಿನ ಸಾವಿನ ಪ್ರಮಾಣ ಇಳಿಯುತ್ತಿವೆ.
'ಈ ಹೊಸ ಮೈಲಿಗಲ್ಲಿನಿಂದಾಗಿ, '5ಟಿ' ವಿಧಾನಗಳನ್ನು (ಟೆಸ್ಟ್, ಟ್ರ್ಯಾಕ್, ಟ್ರೇಸ್, ಟ್ರಿಟ್ ಮತ್ತು ಟೆಕ್ನಾಲಜಿ ಬಳಕೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಭಾರತ ಯಶಸ್ವಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಇದು ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಸಹಕಾರಿಯಾಗಿದೆ' ಎಂಬ ಅವರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.