ನವದೆಹಲಿ: ಭಾರತೀಯ ನೌಕಾಪಡೆಗಾಗಿ ಸುಮಾರು ₹ 43,000 ಕೋಟಿ ವೆಚ್ಚದಲ್ಲಿ ಆರು ಸಾಂಪ್ರದಾಯಿಕ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಬೃಹತ್ ಯೋಜನೆಗೆ ರಕ್ಷಣಾ ಸಚಿವಾಲಯ ಶುಕ್ರವಾರ ಅನುಮೋದನೆ ನೀಡಿದೆ.
ನೌಕಾ ಕ್ಷೇತ್ರದಲ್ಲಿ ಚೀನಾದ ಪರಾಕ್ರಮ ಹೆಚ್ಚಾಗುತ್ತಿದ್ದು, ಅದರ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಉಪಕರಣಗಳ ಖರೀದಿ ಮಂಡಳಿಯ (ಡಿಎಸಿ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
'ಮೇಕ್ ಇನ್ ಇಂಡಿಯಾ' ಭಾಗವಾಗಿ 'ಪಿ-75 ಇಂಡಿಯಾ' ಯೋಜನೆಯ ಪ್ರಸ್ತಾವನೆಗೆ ಕೋರಿಕೆ (ಆರ್‌ಎಫ್‌ಪಿ) ಶೀಘ್ರ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜಲಾಂತರ್ಗಾಮಿ ನೌಕೆಗಳ ವಿಶೇಷಣಗಳು ಮತ್ತು ಈ ಬೃಹತ್ ಯೋಜನೆಗಾಗಿ ಪ್ರಸ್ತಾವನೆಯ ಕೋರಿಕೆಗಳನ್ನು ರಕ್ಷಣಾ ಸಚಿವಾಲಯ ಮತ್ತು ಭಾರತೀಯ ನೌಕಾಪಡೆಯ ಪ್ರತ್ಯೇಕ ತಂಡಗಳು ಈಗಾಗಲೇ ಪೂರ್ಣಗೊಳಿಸಿವೆ ಎಂದು ಮೂಲಗಳು ಹೇಳಿವೆ.