ನವದೆಹಲಿ: ''ರಕ್ಷಣಾ ಉತ್ಕೃಷ್ಟತೆಗಾಗಿ ಆವಿಷ್ಕಾರ (ಐಡೆಕ್ಸ್) ಯೋಜನೆಯಡಿ ಮುಂದಿನ ಐದು ವರ್ಷಗಳಿಗಾಗಿ ರಕ್ಷಣಾ ಆವಿಷ್ಕಾರ ಸಂಸ್ಥೆ- ಡಿಐಓಗೆ 498.8 ಕೋಟಿ ರೂಪಾಯಿ ಬಜೆಟ್ ಬೆಂಬಲ ಕಲ್ಪಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ.
ರಕ್ಷಣಾ ಆವಿಷ್ಕಾರ ಸಂಸ್ಥೆ- ಡಿಐಓ ಚೌಕಟ್ಟಿನೊಳಗೆ ಸುಮಾರು 300 ನವೋದ್ಯಮಗಳು, ಎಂಎಸ್‌ಎಂಇಗಳು, ವ್ಯಕ್ತಿಗತ ನಾವೀನ್ಯಕಾರರು ಹಾಗೂ 20 ಪಾಲುದಾರ ಇನ್ಕ್ಯುಬೇಟರ್ ಗಳಿಗೆ ಹಣಕಾಸಿನ ನೆರವು ಕಲ್ಪಿಸುವ ಉದ್ದೇಶ ಈ ಯೋಜನೆ ಹೊಂದಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ದೇಶದ ರಕ್ಷಣಾ ಹಾಗೂ ವಾಯು ವಲಯದಲ್ಲಿ ಸ್ವದೇಶಿಕರಣ ಹಾಗೂ ಸ್ವಾವಲಂಬನೆಯ ಪ್ರಾಥಮಿಕ ಉದ್ದೇಶವನ್ನು ಐಡೆಕ್ಸ್ - ಡಿಐಓ ಹೊಂದಿದ್ದು, ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಬಜೆಟ್ ಬೆಂಬಲ ದೊಡ್ಡ ಶಕ್ತಿ ನೀಡಲಿದೆ.
ಪಾಲುದಾರ ಉತ್ಪಾದಕ (ಪಿಐ) ರೂಪದಲ್ಲಿ ಐಡೆಕ್ಸ್ ನೆಟ್ ವರ್ಕ್ ಸ್ಥಾಪಿಸಿ ನಿರ್ವಹಿಸಲು ರಕ್ಷಣಾ ಉತ್ಪಾದನಾ ಇಲಾಖೆ (ಡಿಡಿಪಿ) ಡಿಐಓಗೆ ಹಣ ಬಿಡುಗಡೆ ಮಾಡಲಿದೆ. ಪಿ ಐಗಳ ಮೂಲಕ ಎಂಎಸ್ ಎಂಗಳ ನಾವೀನ್ಯಕಾರರು, ನವೋದ್ಯಮಗಳು ಹಾಗೂ ತಂತ್ರಜ್ಞಾನ ಕೇಂದ್ರಗಳೊಂದಿಗೆ ಸಂವಹನ ನಡೆಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಡಿಐಓ ತನ್ನ ತಂಡದೊಂದಿಗೆ, ನಾವೀನ್ಯಕಾರರು ರಕ್ಷಣಾ ಉತ್ಪಾದನಾ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವಂತೆ ಸೂಕ್ತ ಮಾರ್ಗೋಪಾಯಗಳನ್ನು ರೂಪಿಸಲಿದೆ.