ನವದೆಹಲಿ, ಜೂ.12: ಖೋರಾಸಾನ್ ಪ್ರಾಂತ್ಯದ (ಐಎಸ್‌ಕೆಪಿ) ಇಸ್ಲಾಮಿಕ್ ಸ್ಟೇಟ್ ಸೇರಲು ತಮ್ಮ ಗಂಡಂದಿರೊಂದಿಗೆ ಬಂದು ಬಂಧಿತರಾಗಿ ಅಫ್ಘಾನಿಸ್ತಾನ ಜೈಲಿನಲ್ಲಿದ್ದ ನಾಲ್ವರು ಭಾರತೀಯ ಮಹಿಳೆಯರು ದೇಶಕ್ಕೆ ಮರಳುವುದಕ್ಕೆ ಅನುಮತಿ ಇಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಾಲ್ವರೂ ಮಹಿಳೆಯರು ಕೇರಳದವರಾಗಿದ್ದು 2016-18ರಲ್ಲಿ ಅಫ್ಘಾನಿಸ್ತಾನದ ನಂಗಹಾರ್‌ಗೆ ಪ್ರಯಾಣ ಮಾಡಿದ್ದರು. ಅಫ್ಘಾನಿಸ್ತಾನದಲ್ಲಿ ದಾಳಿಯೊಂದರಲ್ಲಿ ಈ ನಾಲ್ವರ ಪತಿಗಳು ಕೊಲೆಯಾಗಿದೆ. 2019 ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಅಫ್ಘಾನಿಸ್ತಾನ ಅಧಿಕಾರಿಗಳ ಮುಂದೆ ಶರಣಾದ ಸಾವಿರಾರು ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರಲ್ಲಿ ಈ ನಾಲ್ವರು ಮಹಿಳೆಯರೂ ಕೂಡಾ ಸೇರಿದ್ದಾರೆ.
ಏಪ್ರಿಲ್ 27 ರಂದು ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಮುಖ್ಯಸ್ಥ ಅಹ್ಮದ್ ಜಿಯಾ ಸರಜ್ ಕಾಬೂಲ್‌ನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡುತ್ತಾ, 13 ದೇಶಗಳಿಂದ ಇಸ್ಲಾಮಿಕ್ ಸ್ಟೇಟ್ ನ 408 ಸದಸ್ಯರನ್ನು ಅಫ್ಘಾನಿಸ್ತಾನ ಕಾರಾಗೃಹಗಳಲ್ಲಿ ಬಂಧಿತರಾಗಿದ್ದಾರೆ ಎಂದು ತಿಳಿಸಿದ್ದರು. ಈ ಪೈಕಿ ನಾಲ್ವರು ಭಾರತೀಯರು, 16 ಮಂದಿ ಚೀನೀಯರು, 299 ಪಾಕಿಸ್ತಾನಿಗಳು, ಇಬ್ಬರು ಬಾಂಗ್ಲಾದೇಶಿಗರು, ಇಬ್ಬರು ಮಾಲ್ಡೀವ್ಸ್ ದೇಶಕ್ಕೆ ಸೇರಿದ್ದಾರೆ.
ಈ ಬಳಿಕ ಖೈದಿಗಳನ್ನು ಗಡೀಪಾರು ಮಾಡಲು ಅಫ್ಘಾನಿಸ್ತಾನ ಸರ್ಕಾರ 13 ದೇಶಗಳೊಂದಿಗೆ ಮಾತುಕತೆ ಆರಂಭಿಸಿದೆ ಎಂದು ಸರಜ್ ಹೇಳಿದ್ದಾರೆ. ಈ ನಡುವೆ ಅಫ್ಘಾನ್ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಆದಾಗ್ಯೂ, ನಾಲ್ಕು ಮಹಿಳೆಯರು ಹಿಂದಿರುಗುವ ಬಗ್ಗೆ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಒಮ್ಮತವಿಲ್ಲ. ನಾಲ್ವರಿಗೂ ಮರಳುವ ಯಾವುದೇ ಅವಕಾಶವಿಲ್ಲ ಎಂದು ಮೂಲವೊಂದು ತಿಳಿಸಿದೆ. ಶರಣಾದ ಒಂದು ತಿಂಗಳ ನಂತರ, 2019 ರ ಡಿಸೆಂಬರ್‌ನಲ್ಲಿ ಕಾಬೂಲ್‌ನಲ್ಲಿರುವ ಭಾರತೀಯ ಭದ್ರತಾ ಸಂಸ್ಥೆಗಳು ಮಹಿಳೆಯರನ್ನು ಅವರ ಮಕ್ಕಳೊಂದಿಗೆ ಸಂದರ್ಶನ ನಡೆಸಿದೆ.
ಮಾರ್ಚ್ 2020 ರಲ್ಲಿ, ವೆಬ್‌ಸೈಟ್ ಒಂದರಲ್ಲಿ ಮೂವರು ಮಹಿಳೆಯರನ್ನು ವಿಚಾರಣೆ ಮಾಡುವ ವೀಡಿಯೊವನ್ನು ಪ್ರಕಟಿಸಲಾಗಿದೆ. ವೀಡಿಯೊದಲ್ಲಿ ಕಾಣಿಸಿಕೊಂಡ ನಾಲ್ವರು ಮಹಿಳೆಯರನ್ನು ಸೋನಿಯಾ ಸೆಬಾಸ್ಟಿಯನ್ ಅಲಿಯಾಸ್ ಆಯಿಷಾ, ರಾಫೆಲಾ, ಮೆರಿನ್ ಜಾಕೋಬ್ ಅಲಿಯಾಸ್ ಮರಿಯಮ್ಮ ಮತ್ತು ನಿಮಿಷಾ ಅಲಿಯಾಸ್ ಫಾತಿಮಾ ಇಸಾ ಎಂದು ಗುರುತಿಸಲಾಗಿದೆ. ಇನ್ನು ಇತರ ಇಬ್ಬರು ಭಾರತೀಯ ಮಹಿಳೆಯರು ಮತ್ತು ಒಬ್ಬ ಪುರುಷ ಕೂಡಾ ಶರಣಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ನಾಲ್ವರಿಗೂ ಹಿಂದಿರುಗಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಆದರೆ ಆ ನಾಲ್ವರ ಸಂದರ್ಶನವನ್ನು ನೋಡಿದಾಗ ಅವರು ಸಂಪೂರ್ಣವಾಗಿ ಆ ಸಿದ್ದಾಂತಕಕ್‌ಎ ಬದ್ದರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರದಲ್ಲಿ ನಾವು ಫ್ರಾನ್ಸ್ ಮಾದರಿಯನ್ನು ಅನುಸರಿಸಬಹುದು ಮತ್ತು ಅಫ್ಘಾನಿಸ್ತಾನ ಅಧಿಕಾರಿಗಳಲ್ಲಿ ಈ ನಾಲ್ವರ ವಿಚಾರಣೆ ನಡೆಸಲು ಕೋರಬಹುದು" ಎಂದು ಅಧಿಕಾರಿ ತಿಳಿಸಿದ್ದಾರೆ.