ನವದೆಹಲಿ: ಕೊರೋನಾ ಸೋಂಕು ಎದುರಿಸಲು 5 ತಿಂಗಳಿನಿಂದ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿ ಭಾರತದ ಒಟ್ಟಾರೆ ವಯಸ್ಕರ ಪೈಕಿ ಶೇ.5 ರಷ್ಟು ವಯಸ್ಕ ಜನಸಂಖ್ಯೆಗೆ ಎರಡೂ ಡೋಸ್ ಗಳ ಲಸಿಕೆ ನೀಡಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಜೂ.18 ರಂದು ನೀಡಿರುವ ಮಾಹಿತಿಯ ಪ್ರಕಾರ 94 ಕೋಟಿ ವಯಸ್ಕ ಜನಸಂಖ್ಯೆಯ ಪೈಕಿ 5.03 ಕೋಟಿ ಮಂದಿಗೆ ಎರಡೂ ಡೋಸ್ ಗಳ ಲಸಿಕೆಯನ್ನು ನೀಡಲಾಗಿದೆ. ಕನಿಷ್ಟ 27.07 ಕೋಟಿ ಮಂದಿ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದು ನಾಲ್ಕನೇ ಒಂದರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ.
ಪೂರ್ತಿ ಜನಸಂಖ್ಯೆಗೆ ಲಸಿಕೆ ನೀಡಿರುವ ರಾಷ್ಟ್ರಗಳ ಪೈಕಿ ಭಾರತಕ್ಕಿಂತ 80 ರಾಷ್ಟ್ರಗಳು ಮುಂದಿದೆ. ಕಳೆದ ಒಂದು ವಾರದಲ್ಲಿ ದೇಶದಲ್ಲಿ ದಿನವೊಂದಕ್ಕೆ ಸರಾಸರಿ 30.57 ಲಕ್ಷ ಲಸಿಕೆ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ 40 ಲಕ್ಷದ ಗುರಿಗಿಂತಲೂ ಕಡಿಮೆ ಇದೆ. ಜೂ.14 ರಂದು ಅತಿ ಹೆಚ್ಚು ಅಂದರೆ 38.20 ಲಕ್ಷ ಲಸಿಕೆಗಳನ್ನು ಏಪ್ರಿಲ್ ನ ಮೊದಲ ವಾರದಲ್ಲಿ 40 ಲಕ್ಷ ಲಸಿಕೆಯನ್ನು ನೀಡಿರುವುದು ದಾಖಲೆಯಾಗಿದೆ. ಜೂ.14 ರಿಂದ ಲಸಿಕೆ ನೀಡುವ ಪ್ರಮಾಣ ಇಳಿಕೆಯಾಗಿದ್ದು, ಈ ಪರಿಸ್ಥಿತಿ ಉತ್ತಮವಾದುದ್ದಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.
ವರ್ಷಾಂತ್ಯಕ್ಕೆ ಇಡೀ ಜನಸಂಖ್ಯೆಗೆ ಲಸಿಕೆ ನೀಡುವ ಸರ್ಕಾರದ ಗುರಿ ತಲುಪಬೇಕಾದರೆ ದಿನವೊಂದಕ್ಕೆ 70-75 ಲಕ್ಷ ಮಂದಿಗೆ ಲಸಿಕೆ ನೀಡಬೇಕಾಗುತ್ತದೆ ಎಂದು ಕೋವಿಡ್-19 ಟಾಸ್ಕ್ ಫೋರ್ಸ್ ನ ಸದಸ್ಯರೊಬ್ಬರು ಹೇಳಿದ್ದಾರೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಜೂನ್ ತಿಂಗಳಲ್ಲಿ ಶೇ.50 ರಷ್ಟು ಕೋವಿಡ್-19 ಲಸಿಕೆಗಳು ಲಭ್ಯವಿದೆ. 10 ಕೋಟಿ ಹಾಗೂ 90 ಲಕ್ಷ ಡೋಸ್ ಗಳ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಅನುಕ್ರಮವಾಗಿ ಜೂನ್ ನಲ್ಲಿ ಲಭ್ಯವಿರಲಿದೆ. ಇದರ ಜೊತೆಗೆ 1 ಕೋಟಿ ಸ್ಪುಟ್ನಿಕ್ ಲಸಿಕೆಯೂ ಲಭ್ಯವಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.