ಕಾಸರಗೋಡು: ಬಿತ್ತನೆ ನಡೆಸಿ ಮೊಳಕೆ ಬಂದ ಸಸಿಗಳು ಮಣ್ಣಿಗೆ ತಲಪಲಿವೆ.
ವಿಶ್ವ ಪರಿಸರ ದಿನವಾಗಿರುವ ಜೂ.5ರಂದು ಕಾಸರಗೋಡು ಜಿಲ್ಲಾ ಕುಟುಂಬಶ್ರೀ ಮಿಷನ್ ವಿಭಿನ್ನ ಅಭಿಯಾನದೊಂದಿಗೆ ರಂಗಕ್ಕಿಳಿಯುತ್ತಿದೆ. ಇದರ ಅಂಗವಾಗಿ 5 ಲಕ್ಷ ಹಲಸಿನ ಸಸಿಗಳನ್ನು ಕಾಸರಗೊಡು ಜಿಲ್ಲೆಯ ವಿವಿಧೆಡೆ ನೆಡಲಾಗುವುದು. "ಪೆಣ್ ಮರಂ(ಹೆಣ್ಣು ಮರ)-ನಾಳೆಗಾಗಿ ಇಂದಿನ ಜಾಗೃತಿ" ಎಂಬ ಸಂದೇಶದೊಂದಿಗೆ ಈ ಚಟುವಟಿಕೆಗಳು ನಡೆಯಲಿವೆ.
ಕಳೆದ ಒಂದು ತಿಂಗಳಿಂದ ಬಿತ್ತನೆ ನಡೆಸಿ ಪೋಷಣೆಯಿಂದ ಮೊಳಕೆಯೊಡೆದ ಸಸಿಗಳನ್ನು ಸೂಕ್ತ ಜಾಗಗಳಲ್ಲಿ ಈ ಮೂಲಕ ನೆಡಲಾಗುವುದು. ಪ್ಲಾಸ್ಟಿಕ್ ಗ್ರೋ ಬ್ಯಾಗ್ ಹೊರತುಪಡಿಸಿ ಪ್ರಕೃತಿ ಸ್ನೇಹಿ ಸಾಮಾಗ್ರಿಗಳಾದ ಅಡಕೆ ಹಾಳೆ, ಎಳನೀರು ಚಿಪ್ಪು ಇತ್ಯಾದಿಗಳಲ್ಲಿ ಸಸಿಗಳ ಮೊಳಕೆ ಬರಿಸುವಿಕೆ ನಡೆಸಲಾಗಿತ್ತು. ಕಾಸರಗೋಡು ಜಿಲ್ಲೆಯ ಕುಟುಂಬಶ್ರೀ ಸದಸ್ಯರು, ಬಾಲಸಭಾ ಸದಸ್ಯರು ಹಲಸಿನ ಸಸಿಗಳನ್ನು ನೆಡಲಿದ್ದಾರೆ. ಉಂದಿನ ತಲೆಮಾರಿಗೆ ಪ್ರಾಕೃತಿಕ ವೈವಿಧ್ಯಗಳನ್ನು ಕಾಯ್ದಿರುವ ಉದ್ದೇಶದಿಂದ ಹೆಣ್ಣುಮರ ಯೋಜನೆ ರಚನೆಗೊಂಡಿದೆ.
ಇಂದು ಬೆಳಗ್ಗೆ 9.30ಕ್ಕೆ ಸ್ಥಳೀಯಾಡಳಿತೆ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಅವರು ಆನ್ ಲೈನ್ ರೂಪದಲ್ಲಿ ಪೆಣ್ ಮರಂ ಅಭಿಯಾನವನ್ನು ಉದ್ಘಾಟಿಸುವರು. ನಂತರ ಜಿಲ್ಲೆಯ 1,74,838 ಮಂದಿ ಕುಟುಂಬಶ್ರೀ ಸದಸ್ಯರು, 16,485 ಬಾಲಸಭಾ ಸದಸ್ಯರಾದ ಮಕ್ಕಳು ವಿವಿಧೆಡೆ ಹಲಸಿನ ಸಸಿಗಳನ್ನು ನೆಡುವರು. ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸುವರು. ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್, ಸಿ.ಡಿ.ಎಸ್. ಅಧ್ಯಕ್ಷೆ ಸಿ.ಟಿ.ಶ್ರೀಲತಾ ಮೊದಲಾದವರು ಉಪಸ್ಥಿತರಿರುವರು.