ತಿರುಮಲ: ತಿರುಪತಿಯ ವೆಂಕಟೇಶ್ವರ ದೇವಾಲಯ ಹುಂಡಿಗೆ ಅಮಾನ್ಯಗೊಂಡಿರುವ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳು ಇನ್ನೂ ಹರಿದುಬರುತ್ತಿದ್ದು, ಇವುಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ಗೊಂದಲದಲ್ಲಿ ಆಡಳಿತ ಮಂಡಳಿ ಸಿಲುಕಿದೆ. ಶನಿವಾರ ನಡೆದ ದೇವಾಲಯದ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿದೆ. ಆದರೆ ನೋಟುಗಳನ್ನು ಏನು ಮಾಡಬೇಕು ಎಂಬ ಬಗ್ಗೆ ಒಮ್ಮತದ ನಿರ್ಧಾರ ಮೂಡಿಲ್ಲ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ತಿಳಿಸಿದ್ದಾರೆ.
2016 ನವೆಂಬರ್ನಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ನಿರ್ಧಾರ ಘೋಷಣೆ ಮಾಡಿತ್ತು. ಅಂದಿನಿಂದ 1.8 ಲಕ್ಷ ಸಾವಿರ ರೂ. ನೋಟು, 6.34 ಲಕ್ಷ 500 ರೂ. ನೋಟುಗಳು ಹುಂಡಿಗೆ ಬಂದಿವೆ. ಇವುಗಳ ಒಟ್ಟು ಮೊತ್ತ 50 ಕೋಟಿ ರೂ.ಗೂ ಅಧಿಕ. ಈ ನೋಟುಗಳನ್ನು ಜಮಾ ಮಾಡುವುದು ಅಥವಾ ಹೊಸ ನೋಟಿಗೆ ಬದಲಾವಣೆ ಮಾಡುವ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನಾಲ್ಕು ಮನವಿ ಮಾಡಲಾಗಿತ್ತು. ಆದರೆ ಅಮಾನ್ಯಗೊಂಡ ನೋಟುಗಳನ್ನು ಈಗ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈ ನೋಟುಗಳನ್ನು ಏನು ಮಾಡಬೇಕು ಎಂಬ ಗೊಂದಲ ಮುಂದುವರಿದಿದೆ ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ವಿಲೇವಾರಿ ಏಕೆ ಸಾಧ್ಯವಿಲ್ಲ?:
ಇತರ ಸಂದರ್ಭಗಳಲ್ಲಿ ಹಳೇ ನೋಟುಗಳನ್ನು ಸಂಬಂಧಿಸಿದ ಅಧಿಕಾರಿಗಳ ಅನುಮತಿ ಪಡೆದು ಸುಟ್ಟು ಹಾಕಬಹುದು. ಆದರೆ ಇದು ವೆಂಕಟೇಶ್ವರನಿಗೆ ಭಕ್ತರು ನೀಡಿರುವ ಕಾಣಿಕೆ. ದೇವರಿಗೆ ಸೇರಿದ ಸಂಪತ್ತು. ಹೀಗಾಗಿ ಇದನ್ನು ಸುಟ್ಟು ಹಾಕುವುದು, ಇನ್ಯಾವುದೇ ರೀತಿಯಲ್ಲಿ ವಿಲೇವಾರಿ ಮಾಡುವುದು ಸರಿಯಲ್ಲ. ಭಕ್ತರ ಭಾವನೆಗೆ ಇದರಿಂದ ಘಾಸಿಯಾಗುತ್ತದೆ ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಭಕ್ತರ ಸಂಖ್ಯೆ ಏರಿಕೆ: ಕರೊನಾ ಹಿನ್ನೆಲೆಯಲ್ಲಿ ಪ್ರತಿದಿನ ಭಕ್ತರ ಸಂಖ್ಯೆಯನ್ನು 10 ಸಾವಿರಕ್ಕೆ ಮಿತಿಗೊಳಿಸಲಾಗಿತ್ತು. ಈಗ ಅದನ್ನು 12 ಸಾವಿರಕ್ಕೆ ಹೆಚ್ಚಿಸಲಾಗಿದೆ. ದೇವಾಲಯಕ್ಕೆ ಎಲೆಕ್ಟ್ರಿಕ್ ಬಸ್ಗಳ ನಿಯೋಜನೆ, ಕಾಶ್ಮೀರ ಸೇರಿ ದೇಶಾದ್ಯಂತ ಮಂದಿರಗಳ ನಿರ್ಮಾಣ ಕಾರ್ಯ ಚುರುಕು ಗೊಳಿಸಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ದೇಶದ ಹಲವು ಪ್ರದೇಶಗಳಲ್ಲಿ ಟಿಟಿಡಿ ದೇವಾಲಯಗಳನ್ನು ನಿರ್ಮಾಣ ಮಾಡುತ್ತಿದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ.