ನವದೆಹಲಿ: ಗಾಲ್ವಾನ್ ಕಣಿವೆ ಹಾಗೂ ಪೂರ್ವ ಲಡಾಖ್ ನಲ್ಲಿ ಉಭಯ ರಾಷ್ಟ್ರಗಳ ಘರ್ಷಣೆಯ ಬಳಿಕ ಎರಡು ಅಣ್ವಸ್ತ್ರ ಶಕ್ತಿ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮುಂದುವರಿದಿರುವುದರಿಂದ ಚಾರಿತ್ರಿಕ ನಡೆಯಾಗಿ ಭಾರತ ಚೀನಾದೊಂದಿಗಿನ ಗಡಿಗೆ ಸುಮಾರು 50 ಸಾವಿರ ಹೆಚ್ಚುವರಿ ಯೋಧರನ್ನು ರವಾನಿಸಿದೆ ಎಂದು ಬ್ಲ್ಯೂಮ್'ಬರ್ಗ್ ವರದಿ ಮಾಡಿದೆ.
ಇದರಿಂದ ಗಾಲ್ವಾನ್ ಗಡಿಯಲ್ಲಿ ಭಾರತದ ಯೋಧರ ಸಂಖ್ಯೆ 2 ಲಕ್ಷಕ್ಕೆ ಹೆಚ್ಚಿದ್ದು, ಇದು ಗಾಲ್ವಾನ್ ಸಂಘರ್ಷದ ಪೂರ್ವದ ಸ್ಥಿತಿಗೆ ಹೋಲಿಸಿದರೆ ಶೇ.40 ಹೆಚ್ಚಾಗಿದೆ. ಅಲ್ಲದೆ, ಗಡಿಯಲ್ಲಿ ಇಷ್ಟೊಂದು ಪ್ರಮಾಣದ ಸೇನೆ ಜಮಾವಣೆ ಮಾಡಿರುವುದು ಇದೇ ಮೊದಲು.
1962ರಲ್ಲಿ ಭಾರತ-ಚೀನಾ ನಡುವೆ ಯುದ್ಧ ನಡೆದಿದ್ದರೂ ಈಗ ಭಾರತದ ಕಾರ್ಯತಂತ್ರದ ಗಮನ ಪ್ರಾಥಮಿಕವಾಗಿ ಪಾಕಿಸ್ತಾನದ ಮೇಲಿದೆ. ದೀರ್ಘ ಕಾಲದ ವೈರಿಯಾಗಿರುವ ಪಾಕಿಸ್ತಾನದೊಂದಿಗೆ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಭಾರತ ಮೂರು ಬಾರಿ ಯುದ್ಧ ಮಾಡಿದೆ. ಆದರೆ, ಕಳೆದ ವರ್ಷ ಪೂರ್ವ ಲಡಾಖ್ನಲ್ಲಿ ಭಾರತ ಹಾಗೂ ಚೀನಾ ನಡುವಿನ ಮಾರಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮೋದಿ ಸರಕಾರ ಇಸ್ಲಾಮಾಬಾದ್ ಹಾಗೂ ಬೀಜಿಂಗ್ ನೊಂದಿಗಿನ ಉದ್ವಿಗ್ನತೆ ನಿವಾರಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ.
ಆದರೆ, ಇದೇ ಸಂದರ್ಭ ಯಾವುದೇ ಸಂಭವನೀಯ ಯುದ್ಧಕ್ಕೆ ಸಿದ್ಧರಾಗಿರುವಂತೆ ಸಶಸ್ತ್ರ ಪಡೆಗಳಿಗೆ ಸೂಚಿಸಿದೆ. ಕಳೆದ ಬಾರಿ ಗಾಲ್ವಾನ್ ಸಂಘರ್ಷದಿಂದ ಪಾಠ ಕಲಿತಿರುವ ಭಾರತ, ಈ ಬಾರಿ ಗಡಿಯಲ್ಲಿ ಚೀನಾ ಸೇನೆ ಮುನ್ನುಗ್ಗದಂತೆ ಕಟ್ಟೆಚ್ಚರ ವಹಿಸಿದೆ. ಇದರಂತೆ ಗಡಿಯಲ್ಲಿ ನಿರಂತರವಾಗಿ ಕಾವಲನ್ನು ಮುಂದುವರೆಸಿದೆ. ಸೈನಿಕರ ಜೊತೆಗೆ ಜೆಟ್ ವಿಮಾನಗಳನ್ನು ಚೀನಾ ಗಡಿಗೆ ಹೊಂದಿಕೊಂಡ ಮೂರು ವಿಭಿನ್ನ ಸ್ಥಳಗಳಲ್ಲಿ ನಿಯೋಜನೆ ಮಾಡಿದೆ. ಈ ಮುನ್ನ ಚೀನಾದ ಚಲನವಲನಗಳಿಗೆ ತಡೆ ಒಡ್ಡುವ ಉದ್ದೇಶದಿಂದ ಗಡಿಯಲ್ಲಿ ಭಾರತವು ಸೇನೆ ಜಮಾವಣೆ ಮಾಡಿತ್ತು.ಇದೀಗ ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜನೆ ಮಾಡಿರುವುದು ಚೀನಾದ ವಿರುದ್ಧ ದಾಳಿ ನಡೆಸಲು ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಚೀನಾ ಆಕ್ರಮಣಶೀಲತೆ ಪ್ರದರ್ಶಿಸಿದರೆ ಆ ಪ್ರದೇಶವನ್ನು ವಶಪಡಿಸಿಕೊಳ್ಳುವುದಕ್ಕೆ ಸೇನೆಗ ಈಗ ಹೆಚ್ಚಿನ ಬಲ ಬಂದಂತಾಗಿದೆ.
ಈ ಹಿಂದೆ ಭಾರತ ಸೇನೆಯ ನಿಯೋಜನೆ ಚೀನಾದ ನಡೆಗಳನ್ನು ತಡೆಯುವ ಉದ್ದೇಶವನ್ನು ಹೊಂದಿದ್ದರೂ ಈಗ ಸೇನೆಯ ಮರು ನಿಯೋಜನೆ ‘ಆಕ್ರಮಣಕಾರಿ ರಕ್ಷಣೆ’ ಎಂದು ಕರೆಯಲಾಗುವ ಕಾರ್ಯತಂತ್ರದ ಮೂಲಕ ಚೀನಾದ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಹಾಗೂ ದಾಳಿ ನಡೆಸಲು ಭಾರತೀಯ ಕಮಾಂಡರ್ಗಳಿಗೆ ಹೆಚ್ಚಿನ ಅವಕಾಶ ನೀಡುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.
ಬಿಎಇ ಸಿಸ್ಟಮ್ ಇಂಕ್ ನಿರ್ಮಿಸಿದ ಎಂ 777ಹೋವಿಟ್ಜರ್ನಂತಹ ಬಂದೂಕುಗಳೊಂದಿಗೆ ಯೋಧರನ್ನು ಕಾಶ್ಮೀರ ಕಣಿವೆಯಿಂದ ಅತಿ ಎತ್ತರದ ಪ್ರದೇಶಗಳಿಗೆ ಸಾಗಿಸಲು ಹೆಚ್ಚು ವಿಮಾನಗಳು ಕೂಡ ಕೇಂದ್ರ ಸರಕಾರ ಚೀನಾ ಗಡಿಯಲ್ಲಿ ಮರು ನಿಯೋಜಿಸಿದ ಪಡೆಗಳಲ್ಲಿ ಸೇರಿದೆ ಎಂದು ವರದಿ ಹೇಳಿದೆ.