ಕಾಸರಗೋಡು: ಕೋವಿಡ್ ತಪಾಸಣೆ ವಿಸ್ತೃತಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಪ್ರತಿ ವಾರ್ಡ್ ನಲ್ಲಿ ತಲಾ 75 ಮಂದಿಯ ಪ್ರಕಾರ 55 ವಾರ್ಡ್ ಗಳಲ್ಲಿ ಪ್ರತಿದಿನ ಕೋವಿಡ್ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ.
ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಒಟ್ಟು 777 ವಾರ್ಡ್ ಗಳಿವೆ. 14 ದಿನಗಳಿಗೊಮ್ಮೆ ಮರಳಿ ತಪಾಸಣೆ ನಡೆಸಲಾಗುವುದು. ಈ ರೀತಿ ಪ್ರತಿದಿನ 4125 ತಪಾಸಣೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆ ಇಂದಿಗೂ ಸುರಕ್ಷಿತ ಸ್ಥಿತಿಗೆ ತಲಪಿಲ್ಲ. ಜನ ಅನಗತ್ಯವಾಗಿ ಅಲೆದಾಡಕೂಡದು. ರಾಜ್ಯ ಸರಕಾರ ಜಾರಿಗೊಳಿಸಿದ ಲಾಕ್ ಡೌನ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದರು. ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ರಾಜ್ಯ ಸರಕಾರ ಆದೇಶಿಸಿರುವ ಅದೇ ರೀತಿ ಮುಂದುವರಿಯುತ್ತಿದೆ ಎಂದವರು ತಿಳಿಸಿದರು. ವಿವಿಧ ವಿಭಾಗಗಳ ಮಂದಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಯಥಾ ಸಮಯಕ್ಕೆ ಪೂರ್ಣಗೊಳಿಸಬೇಕು. ಇತರ ರಾಜ್ಯಗಳ ಕಾರ್ಮಿಕರಿಗೆ ಮತ್ತು ಮೀನುಗಾರರಿಗೆ ಆಹಾರ ಧಾನ್ಯ ಕಿಟ್ ಸೂಕ್ತರೀತಿ ವಿತರಿಸಬೇಕು ಎಂದು ನುಡಿದರು. ಮೇ ತಿಂಗಳ ಕಿಟ್ ವಿತರಣೆ ಈಗ ನಡೆಸಲಾಗುತ್ತಿದೆ ಎಂದು ಜಿಲ್ಲಾ ಸಪ್ಲೈ ಆಫೀಸರ್ ಹೇಳಿದರು.
ಜಿಲ್ಲೆಯ ಪರಿಶಿಷ್ಟ ಜಾತಿ-ಪಂಗಡ ಕಾಲನಿಗಳಲ್ಲಿ 45 ವರ್ಷಕ್ಕಿಂತ ಅಧಿಕ ವಯೋಮಾನದ ಮಂದಿಗೆ ವಾಕ್ಸಿನೇಷನ್ ಈ ವಾರದೊಳಗೆ ಪೂರ್ಣಗೊಳ್ಳಲಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಮಂದಿಗೆ ವಾಕ್ಸಿನೇಷನ್ ಚುರುಕುಗೊಳಿಸಲಾಗುವುದು ಎಂದು ಸಭೆ ತಿಳಿಸಿದೆ.
ಲಾಕ್ ಡೌನ್ ಕಟ್ಟುನಿಟ್ಟುಗಳಲ್ಲಿ ಕೆಲವು ಸಡಿಲಿಕೆ ನಡೆಸಲಾದರೂ, ಅದರ ದುರುಪಯೋಗ ನಡೆಯದಂತೆ ಪೆÇಲೀಸರು ನಿಗಾ ಬಿಗಿಗೊಳಿಸಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್ ತಿಳಿಸಿದರು. 72 ಚೆಕ್ ಪಾಯಿಂಟ್ ಗಳಲ್ಲಿ ಪೆÇಲೀಸರು ಸೂಕ್ಷ್ಮ ತಪಾಸಣೆ ನಡೆಸುತ್ತಿದ್ದಾರೆ. ಸಂಸ್ಥೆಗಳಲ್ಲಿ, ಅಂಗಡಿಗಳಲ್ಲಿ ಕೋವಿಡ್ ಕಟ್ಟುನಿಟ್ಟು ಉಲ್ಲಂಘಿಸುವವರ ಪತ್ತೆ ನಡೆದುಬರುತ್ತಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಹೆಚ್ಚುವರಿ ದಂಡನಾದಿಕಾರಿ ಅತುಲ್ ಎಸ್.ನಾಥ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಜಿಲ್ಲಾ ವೈದ್ಯಾಧಿಕಾರಿ ಕೆ.ಆರ್.ರಾಜನ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಜಿಲ್ಲಾ ಸಪ್ಲೈ ಆಫೀಸರ್ ಕೆ.ಎನ್.ಬಿಂದು, ಹಣಕಾಸು ಅಧಿಕಾರಿ ಕೆ.ಸತೀಶನ್, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಮೀನಾರಾಣಿ, ಜಿಲ್ಲಾ ಸಮಾಜನೀತಿ ಅಧಿಕಾರಿ ಷಿಬಾ ಮುಂತಾಝ್, ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಸಿ.ಎ.ಬಿಂದು, ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.