ನವದೆಹಲಿ: 'ಭಾರತದಲ್ಲಿ 2026 ರ ವೇಳೆಗೆ 5ಜಿ ಬಳಕೆದಾರರ ಸಂಖ್ಯೆ 30.3 ಕೋಟಿ ಇರಲಿದೆ. ಪ್ರತಿ ಬಳಕೆದಾರನ ಮಾಸಿಕ ಡೇಟಾ ಬಳಕೆಯ ಪ್ರಮಾಣ 40 ಜಿಬಿ ಮೀರಲಿದೆ' ಎಂದು ಎರಿಕ್ಸನ್ ಮೊಬಿಲಿಟಿ ವರದಿ-2021 ಹೇಳಿದೆ.
'ಸದ್ಯ ಭಾರತದಲ್ಲಿ ಸರಾಸರಿ ಪ್ರತಿ ತಿಂಗಳು ಒಬ್ಬ ಬಳಕೆದಾರನ ಮಾಸಿಕ ಡೇಟಾ ಬಳಕೆಯ ಪ್ರಮಾಣ 14.6 ಜಿಬಿ ಇದೆ. ಇದು ಜಗತ್ತಿನಲ್ಲಿ ಎರಡನೇ ಸ್ಥಾನ' ಎಂದು ಅದು ಹೇಳಿದೆ.
'2020 ರಲ್ಲಿ ಭಾರತದಲ್ಲಿ 60.8 ಕೋಟಿ 4ಜಿ ಬಳಕೆದಾರರು ಕಂಡು ಬಂದಿದ್ದರು. ಇವರ ಪ್ರಮಾಣ 2026 ರ ವೇಳೆಗೆ 80.3 ಕೋಟಿ ಆಗಲಿದೆ ಎಂದು ವರದಿ ಅಂದಾಜು ಮಾಡಿದೆ. 2026 ಕ್ಕೆ ಒಟ್ಟಾರೆ ಮೊಬೈಲ್ ಬಳಕೆದಾರರಲ್ಲಿ ಶೇ 26 ರಷ್ಟು 5ಜಿ ಬಳಕೆದಾರರು ಇರಲಿದ್ದಾರೆ' ಎಂದು ವರದಿ ಹೇಳಿದೆ.
'ಭಾರತದಲ್ಲಿ ಪ್ರಸ್ತುತ ಶೇ 42 ರಷ್ಟು 4ಜಿ ಬಳಕೆದಾರರು ಮೆಟ್ರೋ ನಗರಗಳಿಗೇ ಸಂಬಂಧಿಸಿದವರಾಗಿದ್ಧಾರೆ' ಎಂದು ಎರಿಕ್ಸನ್ ಭಾರತೀಯ ಮಾರುಕಟ್ಟೆ ಸಂಪರ್ಕ ಜಾಲದ ಮುಖ್ಯಸ್ಥ ನಿತಿನ್ ಬನ್ಸಾಲ್ ಹೇಳುತ್ತಾರೆ.
'ಭಾರತದಲ್ಲಿ 5ಜಿ ಪ್ರಾರಂಭವಾದ ಮೊದಲ ವರ್ಷದಲ್ಲಿ ಸುಮಾರು 4 ಕೋಟಿ ಜನ ಅದರ ಸಂಪರ್ಕ ಪಡೆಯಬಹುದು. ಭಾರತದಲ್ಲಿ 2020 ರಲ್ಲಿ 80.10 ಕೋಟಿ ಮೊಬೈಲ್ ಬಳಕೆದಾರರು ಕಂಡು ಬಂದಿದ್ದರು. ಇದು ಪ್ರತಿ ವರ್ಷ ಶೇ 7 ರಷ್ಟು ಬೆಳವಣಿಗೆ ಹೊಂದಿ, 2026 ರ ವೇಳೆಗೆ 100 ಕೋಟಿ ದಾಟಲಿದೆ' ಎಂದು ಬನ್ಸಾಲ್ ತಮ್ಮ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಹೇಳುತ್ತಾರೆ.
'ಭಾರತದಲ್ಲಿ ವರ್ಕ್ ಫ್ರಮ್ ಹೋಮ್‌ನಿಂದಾಗಿ ಡೇಟಾ ಬಳಕೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದೆ. ಅಲ್ಲದೇ ಭಾರತದಲ್ಲಿ ಇಂಟರನೆಟ್ ಬಳಕೆಯ ಕುಶಾಗ್ರಮತಿಗಳು ಹೆಚ್ಚಿದ್ದಾರೆ' ಎಂದು ವರದಿಯ ಸಂಪಾದಕ ಪ್ಯಾಟ್ರಿಕ್ ಸೇರ್‌ವಾಲ್ ಹೇಳಿದ್ದಾರೆ. ಎರಿಕ್ಸನ್ ಒಂದು ಜಾಗತಿಕ ಟೆಲಿಕಮ್ಯುನಿಕೇಷನ್ ಸಂಸ್ಥೆಯಾಗಿದೆ.