ಚೆನ್ನೈ: ತಮಿಳುನಾಡಿನಲ್ಲಿ ಮತ್ತೊಂದು ಪಟಾಕಿ ದುರಂತ ಸಂಭವಿಸಿದ್ದು, ಪಟಾಕಿ ಸ್ಫೋಟ ಪ್ರಕರಣದಲ್ಲಿ 5 ವರ್ಷದ ಮಗು ಸೇರಿ ಮೂವರ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಸತ್ತೂರು ಜಿಲ್ಲೆಯ ಥಾಯಿಲ್ ಪಟ್ಟಿಯ ಕಲೈನರ್ ಕಾಲನಿಯಲ್ಲಿರುವ ಮನೆಯಲ್ಲಿ ಪಟಾಕಿ ತಯಾರಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಪರಿಣಾಮ ಮನೆಯಲ್ಲಿದ್ದ 5 ವರ್ಷದ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು 35 ವರ್ಷದ ಸೆಲ್ವಂಮಣಿ, ಅವರ 5 ವರ್ಷದ ಪುತ್ರ ಹಾಗೂ 35 ವರ್ಷದ ಕರ್ಪಾಗಂ ಎಂದು ಗುರುತಿಸಲಾಗಿದೆ. ಅಂತೆಯೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೂರ್ಯ ಮತ್ತು ಪ್ರಭಾಕರ್ ಅವರನ್ನು ಸಮೀಪದ ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಸ್ಫೋಟದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಮೂರು ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿವೆ. ಸ್ಫೋಟದ ತೀವ್ರತೆಯಿಂದಾಗಿ ಇಡೀ ಮನೆ ಜಖಂಗೊಂಡಿದೆ
ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಇದೊಂದು ಅಕ್ರಮ ಪಟಾಕಿ ತಯಾರಿಕಾ ಘಟಕವಾಗಿದ್ದು, ಮನೆಯಲ್ಲೇ ಪಟಾಕಿ ತಯಾರಿಸಲಾಗುತ್ತಿತ್ತು. ಈ ವೇಳೆ ಸಂಭವಿಸಿದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.