ಕಾಸರಗೋಡು: ಕುಟುಂಬಶ್ರೀಯ ವಿನೂತನ "ಹೆಣ್ಣುಮರ" ಯೋಜನೆಗೆ ಶನಿವಾರ ಚಾಲನೆ ಲಭಿಸಿದೆ. ಈ ವೇಳೆ ಕಾಸರಗೋಡು ಜಿಲ್ಲೆಯ ವಿವಿಧೆಡೆ ಮಣ್ಣಲ್ಲಿ ಬೇರೂರಿದ್ದು 5 ಲಕ್ಷ ಹಲಸಿನ ಸಸಿಗಳು.
ಪರಿಸರ ದಿನಾಚರಣೆ ಅಂಗವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಸಾಮೂಹಿಕವಾಗಿ ಹಲಸಿನ ಸಸಿಗಳ ನೆಡುವಿಕೆ ಜರುಗಿದೆ. ಜಿಲ್ಲೆಯ 1,74,838 ಕುಟುಂಬಶ್ರೀ ಸದಸ್ಯರು, 16,485 ಬಾಲಸಭೆಯ ಮಕ್ಕಳು ಅವರ ಕುಟುಂಬದ ಸದಸ್ಯರು ಅವರವರ ಮನೆಗಳ ಆವರಣದಲ್ಲಿ ಹಲಸಿನ ಸಸಿಗಳನ್ನು ಈ ಮೂಲಕ ನೆಟ್ಟಿದ್ದಾರೆ.
ರಾಜ್ಯದಲ್ಲೇ ಪ್ರಥಮ ಬಾರಿಗೆ ಈ ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ. ಸ್ಥಳೀಯಾಡಳಿತೆ, ಬಂದರು ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಆನ್ ಲೈನ್ ಮೂಲಕ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಸಚಿವರು ಪರಿಸರ ದಿನಾಚರಣೆ ಎಂಬುದು ಒಂದೇ ದಿನಕ್ಕೆ ಸೀಮತವಾಗಕೂಡದು. ನಾವು ನೆಡುವ ಎಲ್ಲ ಸಸಿಗಳ ಪೋಷಣೆಯ ಪೂರ್ಣ ಹೊಣೆಯನ್ನೂ ನಾವು ಹೊರಬೇಕು. ಕೋವಿಡ್ ಅವಧಿಯಲ್ಲಿ ಮಾದರಿ ರೂಪದ ಚಟುವಟಿಕೆಗಳನ್ನು ಕುಟುಂಬಶ್ರೀ ನಡೆಸುತ್ತಿದೆ ಎಂದವರು ವಿವರಿಸಿದರು.
ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.
ಶಾಸಕರೂ, ಅವರ ಮನೆ ಮಂದಿ ತಮ್ಮ ನಿವಾಸಗಳ ಆವರಣಗಳಲ್ಲಿ ಹಲಸಿನ ಸಸಿಗಳನ್ನು ಈ ಸಂದರ್ಭದಲ್ಲಿ ನೆಟ್ಟಿದ್ದಾರೆ. ಕುಟುಂಬಶ್ರೀ ಜಿಲ್ಲಾ ಸಮಿತಿ ಸಂಚಾಲಕ ಟಿ.ಟಿ.ಸುರೇಂದ್ರನ್ ಸ್ವಾಗತಿಸಿದರು. ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್ ಸಿ.ಡಿ.ಎಸ್.ಅಧ್ಯಕ್ಷೆ ಸಿ.ಟಿ.ಶ್ರೀಲತಾ ವಂದಿಸಿದರು.