ಕೊಚ್ಚಿನ್: ಕೇರಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಲ್ಲಿಕೋಟೆಯ ರಾಮನಟ್ಟುಕಾರ ಸಮೀಪ ವೈದ್ಯಾರಂಗಡಿ ಬಳಿ ಪುಲಿನ್ಜೋಡ್ ರಸ್ತೆಯಲ್ಲಿ ಇಂದು ಮುಂಜಾನೆ 4.40ರ ಸುಮಾರಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಾರು-ಲಾರಿಗೆ ಢಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಪಾಲಕ್ಕಾಡ್ ನ ಚೆರ್ಪುಲ್ಲಸಿರಿ ನಿವಾಸಿಗಳಾದ ನಾಸರ್, ಜುಬೈರ್, ಮುಹಮ್ಮದ್ ಸಾಹೀರ್, ಹಸನಾರ್, ಮತ್ತು ತಾಹಿರ್ ಎಂದು ಗುರುತಿಸಲಾಗಿದೆ. ಐದೂ ಮಂದಿ ಮಹಿಂದ್ರಾ ಬೊಲೆರೋ ವಾಹನದಲ್ಲಿ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯನ್ವಯ ಭಾರಿ ಮಳೆಯಾಗುತ್ತಿದ್ದರಿಂದ ರಸ್ತೆ ಸರಿಯಾಗಿ ಕಾಣದ ಕಾರು ನೇರವಾಗಿ ಎದುರಿಗೆ ಬರುತ್ತಿದ್ದ ಲಾರಿಗೆ ಮುಖಾಮುಖಿ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಐದೂ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಫೆರೋಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.