ನವದೆಹಲಿ: 60 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸಿನ ಜನಸಂಖ್ಯೆಯ ಶೇಕಡಾ 49 ರಷ್ಟು ಜನರಿಗೆ ಮೊದಲ ಡೋಸ್ ಕೋವಿಡ್ -19 ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ. 18ರಿಂದ 44 ವರ್ಷದೊಳಗೆ 59.7 ಕೋಟಿ ಜನರು ಅಂದರೆ ಶೇಕಡಾ 15 ರಷ್ಟು ಜನರು ಮೊದಲ ಡೋಸ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದೆ.
ದೇಶದಲ್ಲಿ ಈವರೆಗೂ ನೀಡಲಾಗಿರುವ ಸಂಚಿತ ಲಸಿಕೆ ಪ್ರಮಾಣ 33.1 ಕೋಟಿ ದಾಟಿದೆ ಎಂದು ಸರ್ಕಾರ ಹೇಳಿದೆ. ಜೂನ್ 21-28 ರಿಂದ 57.68 ಲಕ್ಷ ಸರಾಸರಿ ದೈನಂದಿನ ಲಸಿಕೆ ಪೂರೈಸಲಾಗಿದೆ. ಮೇ 1ರಿಂದ ಜೂನ್ 24ರವರೆಗೂ ಗ್ರಾಮೀಣ ಪ್ರದೇಶದಲ್ಲಿ ಶೇ. 56 ರಷ್ಟು ಡೋಸ್ ನೀಡಿದ್ದರೆ, ಶೇ.44 ರಷ್ಟು ನಗರ ಪ್ರದೇಶದಲ್ಲಿ ನೀಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
45 ರಿಂದ 59 ವರ್ಷದೊಳಗೆ ಶೇ.20.9 ಕೋಟಿ ಜನರು ಅಂದರೆ ಶೇ 42 ರಷ್ಟು ಮಂದಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಮೇ 10 ರಂದು ಗರಿಷ್ಠ ಪ್ರಕರಣ ವರದಿಯಾದ ನಂತರ ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆ ಶೇ.85 ರಷ್ಟು ಕಡಿಮೆಯಾಗಿದೆ.
ಸಾಪ್ತಾಹಿಕ ಪಾಸಿಟಿವಿ ದರದಲ್ಲೂ ಶೇ.85 ರಷ್ಟು ತೀವ್ರಗತಿಯಲ್ಲಿ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮೇ 4 ಮತ್ತು ಮೇ 10 ರ ನಡುವೆ ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.21.3 ರಷ್ಟು ವರದಿಯಾಗಿತ್ತು.