ನವದೆಹಲಿ: ಮ್ಯಾಗಿ ಸೇರಿದಂತೆ ಅನೇಕ ಜನಪ್ರಿಯ ಸಿದ್ದ ಆಹಾರ ಹಾಗೂ ಪಾನೀಯಗಳನ್ನು ತಯಾರಿಸುವ ನೆಸ್ಲೆ ಕಂಪನಿಯ ಆಂತರಿಕ ವರದಿಯೊಂದು ಆ ಕಂಪನಿಯ ಆಹಾರ ಉತ್ಪನ್ನಗಳನ್ನು ಪ್ರೀತಿಸುವವರಿಗೆ ಶಾಕ್ ನೀಡಿದೆ.
ನೆಸ್ಲೆ ತಯಾರಿಸುವ ಶೇ 60 ರಷ್ಟು ಆಹಾರ ಉತ್ಪನ್ನಗಳು ಆರೋಗ್ಯ ಪೂರ್ಣ ಆಹಾರದ ಮಟ್ಟವನ್ನು ಪೂರ್ಣಗೊಳಿಸುವುದಿಲ್ಲ ಎಂದು ಸ್ವತಃ ನೆಸ್ಲೆಯೇ ಹೇಳಿದೆ. ಕಂಪನಿಯ ಇತ್ತೀಚಿನ ವರದಿಯಲ್ಲಿ ಇದು ಉಲ್ಲೇಖವಾಗಿದೆ ಎಂದು ಬ್ರಿಟನ್ ಮೂಲದ ಫೈನಾನ್ಶಿಯಲ್ ಎಕ್ಸಪ್ರೆಸ್ ವರದಿ ಮಾಡಿದೆ. ಅಂದರೆ ನೆಸ್ಲೆಯ ಶೇ 60 ರಷ್ಟು ಉತ್ಪನ್ನಗಳು ಆರೋಗ್ಯಪೂರ್ಣವಲ್ಲ ಎಂಬುದು ಬಹಿರಂಗವಾಗಿದೆ.
'ನಾವು ಎಷ್ಟೇ ಬದಲಾವಣೆ ಮಾಡಿಕೊಂಡರೂ ಕೆಲ ಆಹಾರ ಉತ್ಪನ್ನಗಳು ಆರೋಗ್ಯಕಾರಿಯಾಗಿರಲು ಸಾಧ್ಯವಿಲ್ಲ' ಎಂಬುದನ್ನು ನೆಸ್ಲೆ ಕಂಪನಿ ಒಪ್ಪಿಕೊಂಡಿದೆ. ನೆಸ್ಲೆ ತಯಾರಿಸುವ ಸಾಕುಪ್ರಾಣಿಗಳ ಆಹಾರ ಹಾಗೂ ಮೆಡಿಕಲ್ ನ್ಯೂಟ್ರಿಷನ್ ಮಾತ್ರ ಜಾಗತಿಕವಾಗಿ 3.5 ರಷ್ಟು ರೇಟಿಂಗ ಪಡೆದಿದ್ದು ಬಿಟ್ಟರೇ ಉಳಿದ ಪದಾರ್ಥಗಳು ರೇಟಿಂಗ್‌ನಲ್ಲಿ ತುಂಬಾ ಹಿಂದೆ ಇವೆ ಎಂಬುದು ಉಲ್ಲೇಖವಾಗಿದೆ.
ಆಹಾರ ವಿಭಾಗದಲ್ಲಿ ಶೇ 70 ರಷ್ಟು ಉತ್ಪನ್ನಗಳು ಆರೋಗ್ಯಪೂರ್ಣ ಅಲ್ಲ. ಪಾನೀಯ ವಿಭಾಗದಲ್ಲಿ ಕಾಫಿ ಹೊರತುಪಡಿಸಿ ಶೇ 90 ರಷ್ಟು ಪಾನೀಯಗಳು ಆರೋಗ್ಯಪೂರ್ಣ ಅಲ್ಲ ಎಂಬುದು ಬಹಿರಂಗವಾಗಿದೆ.
ಆದರೆ, ಈ ಬಗ್ಗೆ ಸ್ಪಷ್ಟನೇ ನೀಡಿರುವ ಕಂಪನಿ ವಕ್ತಾರರು 'ಇದೊಂದು ಆಂತರಿಕ ವರದಿಯಷ್ಟೇ. ಆದರೆ ನಮ್ಮ ಗುರಿ ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಮೂಲಕ ಆರೋಗ್ಯಕರ ಹಾಗೂ ಪೋಷಕಾಂಶಗಳನ್ನು ಒಳಗೊಂಡ ತಿನಿಸುಗಳನ್ನು ನೀಡುವುದೇ ಆಗಿದೆ' ಎಂದು ಹೇಳಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ನೆಸ್ಲೆ ತನ್ನ ಉತ್ಪನ್ನಗಳಲ್ಲಿ ಸಕ್ಕರೆ ಮತ್ತು ಸೋಡಿಯಂ ಪ್ರಮಾಣವನ್ನು ಕಡಿಮೆಮಾಡುತ್ತಿದೆ. ಹಿಂದಿನ ಏಳು ವರ್ಷಗಳಲ್ಲೇ ಶೇ 14 ರಿಂದ 15 ರಷ್ಟು ಕಡಿತಗೊಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ನಾವು ಮಕ್ಕಳಿಗೆ ಮತ್ತು ಕುಟುಂಬದವರಿಗೆ ಪೋಷಕಾಂಶಯುಕ್ತವಾದ ಬಹಳಷ್ಟು ತಿನಿಸುಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ನೆಸ್ಲೆ ಕಂಪನಿ ವಕ್ತಾರರು ತಿಳಿಸಿದ್ದಾರೆ.
ಸ್ವಿಸ್ ಮೂಲದ ತ್ವರಿತ ಮಾರಾಟವಾಗುವ ಆಹಾರ ಉತ್ಪನ್ನಗಳನ್ನು ತಯಾರಿಸುವ ನೆಸ್ಲೆ, ಮ್ಯಾಗಿ, ಕಿಟ್‌ಕ್ಯಾಟ್, ನೆಸ್ಕೇಫೆ ಅಂತಹ ಜನಪ್ರಿಯ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ಭಾರತದಲ್ಲಿ ಸಿದ್ದ ಆಹಾರಗಳನ್ನು ಪೂರೈಸುವಲ್ಲಿಯೂ ನೆಸ್ಲೆ ಮುಂದಿದೆ. ಭಾರತದಲ್ಲಿ ಅದರ ಎಂಟು ಆಹಾರ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 2020 ರಲ್ಲಿ 13,290 ಕೋಟಿ ರೂಪಾಯಿ ಮೌಲ್ಯದ ಆಹಾರ ಉತ್ಪನ್ನಗಳನ್ನು ನೆಸ್ಲೆ ಮಾರಾಟ ಮಾಡಿದೆ. ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ₹ 2600 ಕೋಟಿ ಹೂಡಿಕೆ ಮಾಡಲಾಗುವುದು ಎಂದು ಕಂಪನಿ ಕಳೆದ ವರ್ಷ ಪ್ರಕಟಿಸಿತ್ತು.