ಭೋಪಾಲ್: ದೇಶದಲ್ಲಿ ವ್ಯಾಪಕ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ನ ಡೆಲ್ಟಾ ಪ್ಲಸ್ ರೂಪಾಂತರಕ್ಕೆ ಮತ್ತೊಂದು ಬಲಿಯಾಗಿದ್ದು, ಮಧ್ಯ ಪ್ರದೇಶದಲ್ಲಿ ರೂಪಾಂತರಿ ಸೋಂಕಿಗೆ ಬಲಿಯಾದವರ ಸಂಖ್ಯೆ 2ಕ್ಕೇರಿಕೆಯಾಗಿದೆ.
ನಿನ್ನೆಯಷ್ಟೇ ಮಧ್ಯಪ್ರದೇಶದ ಭೂಪಾಲ್ ಲ್ಲಿ 23 ವರ್ಷದ ಯುವತಿಯೊಬ್ಬರು ಡೆಲ್ಟಾ ಪ್ಲಸ್ ರೂಪಾಂತರ ತಳಿಗೆ ಬಲಿಯಾಗಿದ್ದರು. ಇದೀಗ ಮತ್ತೊಬ್ಬ ಸೋಂಕಿತರು ಕೂಡ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಸಾವನ್ನಪ್ಪಿದ ಇಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಂಡಿರಲಿಲ್ಲ ಎಂದು ಹೇಳಲಾಗಿದೆ.
ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ
ಮಧ್ಯ ಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಸೋಂಕಿಗೆ ತುತ್ತಾದ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದ್ದು, ರಾಜಧಾನಿ ಭೋಪಾಲ್ ನಲ್ಲಿ ಮೂರು ಮಂದಿ, ಉಜ್ಜೈನ್ ನಲ್ಲಿ ಇಬ್ಬರು ಮತ್ತು ರೈಸೆನ್ ಮತ್ತು ಅಶೋಕ್ ನಗರದ ತಲಾ ಒಬ್ಬರು ಸೋಂಕಿತರಿದ್ದಾರೆ ಎನ್ನಲಾಗಿದೆ. ಈ ಏಳೂ ಮಂದಿಯ ಜೆನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯನ್ನು ಕಳೆದ ತಿಂಗಳು ಮಾಡಿಸಲಾಗಿತ್ತು. ಆದರೆ ಜೂನ್ ನಲ್ಲಿ ಇದರ ಫಲಿತಾಂಶ ಪ್ರಕಟವಾಗಿದೆ.
ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಈ 7 ಮಂದಿಯ ಪೈಕಿ 3 ಮಂದಿ ಸೋಂಕಿತರು ಕೋವಿಡ್ ಲಸಿಕೆ ಮೊದಲ ಅಥವಾ 2 ಡೋಸ್ ಗಳನ್ನು ಪಡೆದಿದ್ದು, ಇಬ್ಬರು ಕೋವಿಡ್ ಲಸಿಕೆ ಪಡೆದಿರಲಿಲ್ಲ. ಎಲ್ಲರೂ ಗುಣಮುಖರಾಗಿದ್ದಾರೆ. ಲಸಿಕೆ ಪಡೆಯದೇ ಗುಣಮುಖರಾದವರ ಪೈಕಿ 22 ವರ್ಷದ ಯುವತಿ ಮತ್ತು 2 ವರ್ಷದ ಪುಟ್ಟ ಮಗು ಕೂಡ ಸೇರಿದೆ ಎಂದು ಹೇಳಲಾಗಿದೆ.
ದೇಶಾದ್ಯಂತ ಕಟ್ಟೆಚ್ಚರ
ದೇಶದಲ್ಲಿ ಕೊರೊನಾ ವೈರಸ್‌ನ ರೂಪಾಂತರ ತಳಿ ಡೆಲ್ಟಾ ಪ್ಲಸ್ ಪತ್ತೆಯಾಗಿರುವ ಬೆನ್ನಲ್ಲೆ ಕೇಂದ್ರ ಸರ್ಕಾರ ಡೆಲ್ಟಾ ಪ್ಲಸ್ ರೂಪಾಂತರ ತಳಿ ತಡೆಗೆ ಬಿಗಿಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದ್ದು, ಡೆಲ್ಟಾ ಪ್ಲಸ್ ಕಾಣಿಸಿಕೊಂಡಿರುವ ರಾಜ್ಯಗಳಿಗೆ ಕಂಟೈನ್ಮೆಂಟ್ ವಲಯಗಳನ್ನು ಸ್ಥಾಪಿಸಿ ಬಿಗಿಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರ ತಳಿ ಕಾಣಿಸಿಕೊಂಡಿರುವ ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು, ಜಮ್ಮು-ಕಾಶ್ಮೀರ ಸೇರಿದಂತೆ ಎಲ್ಲ ರಾಜ್ಯಗಳಿಗೂ ಡೆಲ್ಟಾ ಪ್ಲಸ್ ತಡೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿರುವ ಕೇಂದ್ರ ಸರ್ಕಾರ ಡೆಲ್ಟಾ ಪ್ಲಸ್ ನ ಪ್ರಸರಣ ತೀವ್ರವಾಗಿರುವ ಮಹಾರಾಷ್ಟ್ರ. ಕೇರಳ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಸಮೀಕ್ಷೆಗೆ ನಿರ್ಧಾರ
ದೇಶದ ಹಲವು ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದರ ಸಮೀಕ್ಷೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಪುಣೆಯ ವೈರಾಣು ಸಂಸ್ಥೆ ಮುಂದಾಗಿದೆ. ಡೆಲ್ಟಾ ಪ್ಲಸ್ ರೂಪಾಂತರ ಸೋಂಕು ಕಾಣಿಸಿಕೊಂಡಿರುವ ರಾಜ್ಯಗಳಲ್ಲಿ ಮೊದಲು ಅಧ್ಯಯನ ಮಾಡಿ ಆನಂತರ ದೇಶದ ಎಲ್ಲ ರಾಜ್ಯಗಳಲ್ಲಿ ಈ ಕುರಿತು ಸಮೀಕ್ಷೆ ನಡೆಸುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.