ಬೆಂಗಳೂರು; ಬೆಂಗಳೂರು ಜನರ ಜೀವನಾಡಿ ಬಿಎಂಟಿಸಿ ಬಸ್ ಸಂಚಾರ ಆರಂಭಿಸಲಿದೆ. ಸದ್ಯ ಜಾರಿಯಲ್ಲಿರುವ ಲಾಕ್‌ಡೌನ್ ಜೂನ್ 7ರ ಸೋಮವಾರ ಬೆಳಗ್ಗೆ 6ಕ್ಕೆ ಮುಕ್ತಾಯಗೊಳ್ಳಲಿದ್ದು, ಮುಂದುವರೆಸುವ ಕುರಿತು ಸರ್ಕಾರ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಜೂನ್ 7ರ ಬಳಿಕ ಲಾಕ್‌ಡೌನ್ ವಿಸ್ತರಣೆಯಾದರೂ ಹಲವು ವಿನಾಯಿತಿ ಸಿಗುವ ಸಾಧ್ಯತೆ ಇದೆ. ಆದ್ದರಿಂದ ಜನದಟ್ಟಣೆ ಹೆಚ್ಚಿರುವ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲು ಬಿಎಂಟಿಸಿ ಮುಂದಾಗಿದೆ. ಈ ಕುರಿತು ನೌಕರರಿಗೂ ನಿರ್ದೇಶನ ನೀಡಲಾಗಿದೆ.
ಹಂತ-ಹಂತವಾಗಿ ಬಸ್ ಸೇವೆಗಳನ್ನು ಆರಂಭಿಸಲು ಬಿಎಂಟಿಸಿ ನಿರ್ಧರಿಸಿದೆ. ನೌಕರರಿಗೆ ಕೆಲಸಕ್ಕೆ ಹಾಜರಾಗಬೇಕು ಎಂದು ಮಾಹಿತಿ ನೀಡಲಾಗಿದೆ. ಸೂಕ್ತ ಕಾರಣವಿಲ್ಲದೇ ಕೆಲಸಕ್ಕೆ ಗೈರಾದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ವ್ಯಾಕ್ಸಿನ್ ಪಡೆಯಿರಿ :
ಜೂನ್ 7ರಿಂದ ಕೆಲಸಕ್ಕೆ ಹಾಜರಾಗುವ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದಿರಬೇಕು. ಕೋವಿಡ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ.
ಪ್ರಸ್ತುತ ಲಾಕ್‌ಡೌನ್ ಪರಿಣಾಮ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಸಂಚಾರ ನಡೆಸಲು ಕೆಲವು ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತಿದೆ.
ಜೂನ್ 7ರ ಬಳಿಕ ಕರ್ನಾಟಕದಲ್ಲಿ ಲಾಕ್‌ಡೌನ್ ಸಂಪೂರ್ಣ ತೆರವುಗೊಳ್ಳಲಿದೆಯೋ?, ವಿಸ್ತರಣೆಯಾಗಲಿದೆಯೋ? ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಜೂನ್ 5 ಅಥವ 6ರಂದು ಸರ್ಕಾರ ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಿದೆ.
ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. 24 ಗಂಟೆಯಲ್ಲಿ 16604 ಹೊಸ ಪ್ರಕರಣಗಳು ದಾಖಲಾಗಿವೆ. 411 ಜನರು ಮೃತಪಟ್ಟಿದ್ದು, 44,473 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.