ನವದೆಹಲಿ: 70 ವರ್ಷಕ್ಕಿಂತ ಮೇಲ್ಪಟ್ಟ ಕೈದಿಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮಧ್ಯಂತರ ಜಾಮೀನು ಅಥವಾ ತುರ್ತು ಪೆರೋಲ್ ಆಧಾರದ ಮೇಲೆ ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
70 ವರ್ಷಕ್ಕಿಂತ ಮೇಲ್ಪಟ್ಟ ಕೈದಿಗಳನ್ನು ಗೌರವಗಳೊಂದಿಗೆ ಬಿಡುಗಡೆ ಮಾಡಲು ಏಕರೂಪದ ಕಾರ್ಯವಿಧಾನ ರೂಪಿಸಲು ಕೇಂದ್ರ ಸರ್ಕಾರ, ರಾಜ್ಯಗಳು , ಕೇಂದ್ರಾಡಳಿತ ಪ್ರದೇಶ ಹಾಗೂ ಉನ್ನತ ಮಟ್ಟದ ಸಮಿತಿಗಳಿಗೆ ನಿರ್ದೇಶಿಸುವಂತೆ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಪಾಟ್ಕರ್ ತಿಳಿಸಿದ್ದಾರೆ.
ಪಾಟ್ಕರ್ , ವಕೀಲ ವಿಪಿನ್ ನಾಯರ್ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ, ಜೈಲಿನೊಳಗೆ ಇರುವವರೆಗೂ ಯಾರೂ ಕೂಡಾ ತನ್ನ ರಾಷ್ಟ್ರದ ಬಗ್ಗೆ ಸಂಪೂರ್ಣವಾಗಿ ಅರಿಯಲು ಸಾಧ್ಯವಿರುವುದಿಲ್ಲ ಎಂದು ನೆಲ್ಸನ್ ಮಂಡೇಲಾ ಅವರ ಹೇಳಿಕೆ ಹಾಗೂ ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ ಪ್ರಕಟಿಸಿರುವ ಜೈಲು ಅಂಕಿಅಂಶವನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ದೇಶದಲ್ಲಿ ಒಟ್ಟು ಅಪರಾಧಿಗಳ ಪೈಕಿ ಶೇ.19.1 ರಷ್ಟು ಮಂದಿ 50 ವರ್ಷ ಹಾಗೂ ಅದಕ್ಕೂ ಮೇಲ್ಟಟ್ಟಿನವರಾಗಿದ್ದಾರೆ ಎಂದು ಹೇಳಲಾಗಿದೆ.
ಅದೇ ರೀತಿಯಲ್ಲಿ ಶೇ.10.7 ರಷ್ಟು ವಿಚಾರಣಾಧೀನ ಕೈದಿಗಳಲ್ಲಿ 50 ವರ್ಷದವರು ಮತ್ತು ಅದಕ್ಕೂ ಮೇಲ್ಪಟ್ಟಿನವರಾಗಿದ್ದಾರೆ. 50 ಮತ್ತು ಅದಕ್ಕಿಂತಲೂ ಹೆಚ್ಚಿನ ವಯಸ್ಸಿನ ಒಟ್ಟು ಕೈದಿಗಳ ಸಂಖ್ಯೆ 63,336 ಆಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅದೇ ರೀತಿಯಲ್ಲಿ ಮೇ 16ರ ರಾಷ್ಟ್ರೀಯ ಅಪರಾಧ ಮಾಹಿತಿ ಫೋರ್ಟಲ್ ಮಾಹಿತಿಯಂತೆ ಮಹಾರಾಷ್ಟ್ರ, ಮಣಿಪುರ ಮತ್ತು ಲಕ್ಷದ್ವೀಪ ಹೊರತುಪಡಿಸಿದಂತೆ 70 ವರ್ಷಕ್ಕಿಂತ ಮೇಲ್ಪಟ್ಟ ಒಟ್ಟಾರೇ ಕೈದಿಗಳ ಸಂಖ್ಯೆ 5,163 ಆಗಿದೆ.
ಈ ಪ್ರಕರಣಕ್ಕೆ ಸಂಕ್ಷಿಪ್ತ ಹಿನ್ನೆಲೆ ನೀಡಿ, ತುರ್ತು ಪೆರೋಲ್ ಅಥವಾ ಮಧ್ಯಂತರದಲ್ಲಿ ಬಿಡುಗಡೆ ಮಾಡಬಹುದಾದ ಕೈದಿಗಳ ವರ್ಗವನ್ನು ನಿರ್ಧರಿಸಲು ಉನ್ನತ ಮಟ್ಟದ ಸಮಿತಿ ರಚಿಸುವಂತೆ ಸುಪ್ರೀಂಕೋರ್ಟ್ 2020 ಮಾರ್ಚ್ 23 ರಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತ್ತು ಎಂದು ಮೇಧಾ ಪಟ್ಕರ್ ಅರ್ಜಿಯಲ್ಲಿ ತಿಳಿಸಿದ್ದಾರೆ.