ನವದೆಹಲಿ: ಜಿ-7 ಶೃಂಗಸಭೆಯ ಅಧಿವೇಶನದಲ್ಲಿ ವರ್ಚ್ಯುಯಲ್ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕೊರೋನಾ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕಾಗಿ ಜಾಗತಿಕ ಸಮುದಾಯ ಒನ್ ಹೆಲ್ತ್ ಒನ್ ಅರ್ತ್ (ಒಂದೇ ಭೂಮಿ ಒಂದೇ ಆರೋಗ್ಯ) ಕಾರ್ಯವಿಧಾನ ಅಳವಡಿಕೆಗೆ ಕರೆ ನೀಡಿದ್ದಾರೆ.
"ಮುಂದಿನ ಸಾಂಕ್ರಾಮಿಕಗಳ ತಡೆಗೆ ಜಾಗತಿಕ ಏಕತೆ, ನಾಯಕತ್ವ, ಒಗ್ಗಟ್ಟಿಗೆ ಪ್ರಧಾನಿ ಕರೆ ನೀಡಿದ್ದು, ಪ್ರಜಾಸತ್ತೀಯಹಾಗೂ ಪಾರದರ್ಶಕ ಸಮಾಜಗಳಿಗೆ ಇಂತಹ ಸವಾಲುಗಳನ್ನು ನಿಭಾಯಿಸುವಲ್ಲಿ ವಿಶೇಷ ಜವಾಬ್ದಾರಿ ಇದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದೇ ವೇಳೆ ಡಬ್ಲ್ಯುಟಿಒ ಮುಂದಿಡಲಾಗಿರುವ, ಕೋವಿಡ್-19 ಸಂಬಂಧಿತ ತಂತ್ರಜ್ಞಾನಗಳನ್ನು ಪೇಟೆಂಟ್ ಮುಕ್ತಗೊಳಿಸುವ ಭಾರತ ಮತ್ತು ದಕ್ಷಿಣ ಆಫ್ರಿಕಾದ ಪ್ರಸ್ತಾವನೆಗೆ ಪ್ರಧಾನಿ ಮೋದಿ ಜಿ-7 ಬೆಂಬಲವನ್ನೂ ಕೋರಿದ್ದು ಜಾಗತಿಕ ಆರೋಗ್ಯ ಆಡಳಿತದ ಸುಧಾರಣೆಗೆ ಸಾಮೂಹಿಕ ಪ್ರಯತ್ನಗಳಿಗೂ ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಯುಕೆ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಾಲಿ, ಜಪಾನ್, ಅಮೆರಿಕಾಗಳು ಜಿ-7 ರಾಷ್ಟ್ರಗಳಾಗಿದ್ದು, ಆಯೋಜಕ ರಾಷ್ಟ್ರ ಬ್ರಿಟನ್ ಶೃಂಗಸಭೆಯಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲು ಭಾರತ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾಗಳನ್ನು ಆಹ್ವಾನಿಸಿತ್ತು.