ಕಾರ್ಬಿಸ್: ಬ್ರಿಟನ್ ನಲ್ಲಿ ನಡೆದ 3 ದಿನಗಳ ಜಿ-7 ಗುಂಪಿನ ವಿಶ್ವ ನಾಯಕರ ಶೃಂಗಸಭೆ ಭಾನುವಾರ ಮುಕ್ತಾಯಗೊಂಡಿದೆ.
ಜಗತ್ತಿ ಎಲ್ಲಾ ದೇಶಗಳಿಗೆ ಕೊರೊನಾ ಲಸಿಕೆ ಒದಗಿಸಲು ಜಿ 7 ಸದಸ್ಯ ರಾಷ್ಟ್ರಗಳು ನೆರವು ಕಲ್ಪಿಸಲು ತೀರ್ಮಾನಿಸಿವೆ. ಹೆಚ್ಚುತ್ತಿರುವ ವಾಯುಮಾಲಿನ್ಯ ಬಿಕ್ಕಟ್ಟನ್ನು ತಂತ್ರಜ್ಞಾನ ನೆರವಿನಿಂದ ನಿಭಾಯಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳನ್ನು ಗೌರವಿಸಬೇಕು ಎಂದು ಜಿ -7 ಶೃಂಗಸಭೆ ಚೀನಾಕ್ಕೆ ಕರೆ ನೀಡಿದೆ.
ಜೀವವೈವಿಧ್ಯತೆಯ ನಷ್ಟವನ್ನ ತಗ್ಗಿಸಲು ನೇಚರ್ ಕಾಂಪ್ಯಾಕ್ಟ್ 2010ಕ್ಕೆ ಸಂಬಂಧಿಸಿದಂತೆ 2030 ಹೊತ್ತಿಗೆ ಇಂಗಾಲದ ಹೊರಸೂಸುವಿಕೆಯನ್ನು ಅರ್ಧದಷ್ಟು ಕಡಿಮೆ ಮಾಡಲು ಬದ್ದವಾಗಿದ್ದೇವೆ ಎಂದು ಹೇಳಿವೆ.
ಸಾಧ್ಯವಾದಷ್ಟು ತ್ವರಿತವಾಗಿ ಇಂಧನಗಳಿಗಾಗಿ ಶುದ್ಧ ಕಲ್ಲಿದ್ದಲು ಮಾತ್ರ ಬಳಸುವುದನ್ನು ಕಡ್ಡಾಯಗೊಳಿಸಲು, ಪೆಟ್ರೋಲ್, ಡೀಸೆಲ್ ಕಾರುಗಳನ್ನು ಹಂತ ಹಂತವಾಗಿ ಕೈಬಿಡುವ ಸಂಬಂಧ ಈ ಸಮ್ಮೇಳನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಪ್ರಸ್ತುತ ಜಿ-7 ಶೃಂಗಸಭೆಗೆ ಆಸ್ಟ್ರೇಲಿಯಾ, ರಿಪಬ್ಲಿಕ್ ಆಫ್ ಕೊರಿಯಾ, ದಕ್ಷಿಣ ಆಫ್ರಿಕಾದ ಜೊತೆಗೆ ಭಾರತವನ್ನು ಬ್ರಿಟನ್ ಆಹ್ವಾನಿಸಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಗಳೊಂದಿಗೆ ಸಮಾನ ಭಾವನೆಹೊಂದಿರುವ ದೇಶಗಳನ್ನು ಒಂದುಗೂಡಿಸುವ ಪ್ರಯತ್ನದ ಭಾಗವಾಗಿ ಈ ದೇಶಗಳನ್ನು ಜಿ-7 ಶೃಂಗಸಭೆಗೆ ಅತಿಥಿ ದೇಶಗಳನ್ನಾಗಿ ಆಹ್ವಾನಿಸಲಾಯಿತು. ಜಿ-7 ಗುಂಪಿನಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಹಾಗೂ ಅಮೆರಿಕಾ ಸದಸ್ಯ ರಾಷ್ಟ್ರಗಳಾಗಿವೆ.