ಪಾಟ್ನಾ: ಕೊರೋನ ವೈರಸ್ ನ ಮೂರನೇ ಅಲೆಯ ಸಾಧ್ಯತೆ ಹಿನ್ನೆಲೆಯಲ್ಲಿ ದೇಶದಲ್ಲಿ ಮಕ್ಕಳ ಮೇಲೆ ಕೊರೋನ ಲಸಿಕೆ ಟ್ರಯಲ್ ವೇಗ ಪಡೆದುಕೊಂಡಿದ್ದು, ಪಾಟ್ನಾದ ಏಮ್ಸ್ ನಲ್ಲಿ ಶನಿವಾರ ಕನಿಷ್ಠ 7 ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಅನ್ನು ನೀಡಲಾಯಿತು. ಪಾಟ್ನಾದ ಏಮ್ಸ್ ನಲ್ಲಿ 2ರಿಂದ 18 ವರ್ಷ ಪ್ರಾಯ ಗುಂಪಿನ ಮಕ್ಕಳ ಮೇಲೆ ಲಸಿಕೆಯ ಟ್ರಯಲ್ ಜೂನ್ 3ರಿಂದ ಆರಂಭಗೊಂಡಿದ್ದು, ಮೊದಲ ದಿನ ಮೂವರು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಲಸಿಕೆ ನೀಡುವ ಮೊದಲು ಆಸ್ಪತ್ರೆ ಮಕ್ಕಳ ಆರೋಗ್ಯ ತಪಾಸಣೆ ನಡೆಸುತ್ತಿದೆ. 21ರಲ್ಲಿ 11 ಮಕ್ಕಳಲ್ಲಿ ಪ್ರತಿಕಾಯಗಳು ಅಭಿವೃದ್ಧಿಯಾಗಿರುವುದನ್ನು ಪರೀಕ್ಷಾ ವರದಿ ತಿಳಿಸಿದೆ.
ಆದುದರಿಂದ ಉಳಿದ 9ರಲ್ಲಿ 7 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಇದುವರೆಗೆ 10 ಮಕ್ಕಳು ಪಾಟ್ನಾದಲ್ಲಿ ಕೊವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಅವರು ತಮ್ಮ ಲಸಿಕೆಯ ಎರಡನೇ ಡೋಸ್ ಅನ್ನು 28 ದಿನಗಳ ಬಳಿಕ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
''ಟ್ರಯಲ್ ಡೋಸ್ ಅನ್ನು ಕನಿಷ್ಠ 100 ಮಕ್ಕಳಿಗೆ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ'' ಎಂದು ಆಸ್ಪತ್ರೆಯ ಆಡಳಿತ ತಿಳಿಸಿದೆ.
ಈ ಹಿಂದೆ ಪಾಟ್ನಾದ ಏಮ್ಸ್ ನಲ್ಲಿ ಮಕ್ಕಳಿಗೆ ಲಸಿಕೆ ಟ್ರಯಲ್ ನೀಡುವುದರ ಬಗ್ಗೆ ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ಸಂತಸ ವ್ಯಕ್ತಪಡಿಸಿದ್ದರು. ಅಲ್ಲದೆ, ಕೋವಿಡ್ ನಿಂದ ಮಕ್ಕಳನ್ನು ರಕ್ಷಿಸುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ಹೇಳಿದ್ದರು.