ನವದೆಹಲಿ: 80 ಆಕ್ಸಿಜನ್ ಪ್ಲಾಂಟ್ ಗಳ ಅಳವಡಿಕೆ, ಖರೀದಿ ಮತ್ತು ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರ ಕೌಶಲ್ಯ ತರಬೇತಿ ನೆರವಿಗಾಗಿ 133 ಕೋಟಿ ರೂ. ಅನುದಾನವನ್ನು ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿ ಗೂಗಲ್ ಗುರುವಾರ ಪ್ರಕಟಿಸಿದೆ.
ಆರೋಗ್ಯ ಸೇವೆಗಳಲ್ಲಿ 80 ಆಕ್ಸಿಜನ್ ಉತ್ಪಾದನಾ ಘಟಕಗಳ ಅಳವಡಿಕೆ ಹಾಗೂ ಖರೀದಿಯನ್ನು ಗೂಗಲ್ ಬೆಂಬಲಸಲಿದ್ದು 90 ಕೋಟಿಯನ್ನು ಗಿವ್ ಇಂಡಿಯಾ ಮತ್ತು 18.5 ಕೋಟಿಯನ್ನು ಪಾಥ್ ಸಂಸ್ಥೆಗೆ ನೀಡಲಿದೆ.
ಕೋವಿಡ್-19 ನಿರ್ವಹಣೆ ತರಬೇತಿಯೊಂದಿಗೆ 20 ಸಾವಿರ ಆರೋಗ್ಯ ಕಾರ್ಯಕರ್ತರ ಕೌಶಲ್ಯ ತರಬೇತಿಗೆ ನೆರವಾಗಲು ಅಪೊಲೋ ವೈದ್ಯಕೀಯ ಕೌಶಲ್ಯಕ್ಕೆ ಹಣಕಾಸು ಪ್ರಯತ್ನ ಮಾಡಲಿದೆ. ಅಲ್ಲದೇ, ಗ್ರಾಮೀಣ ಆರೋಗ್ಯ ಕಾರ್ಯಕರ್ತರು ಮತ್ತು ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದಾಗಿ ಪ್ರತಿಪಾದಿಸಿದೆ.
ಈ ನಿಟ್ಟಿನಲ್ಲಿ ದೇಶದಲ್ಲಿನ 15 ರಾಜ್ಯಗಳಲ್ಲಿ 180000 ಆಶಾ ಕಾರ್ಯಕರ್ತೆಯರು ಮತ್ತು 40 ಸಾವಿರ ಸಹಾಯಕ ನರ್ಸ್ ಗಳ ಕೌಶಲ್ಯ ಕಾರ್ಯಕ್ರಮಕ್ಕಾಗಿ ಆರ್ಮನ್ ಗೆ 3.6 ಕೋಟಿ ರೂ. ಅನುದಾನವನ್ನು ಗೂಗಲ್ ಸಂಸ್ಥೆ ನೀಡಲಿದೆ. ಅಗತ್ಯವಿರುವಲ್ಲಿ ಆಶಾ ಕಾರ್ಯಕರ್ತರು ಮತ್ತು ದಾದಿಯರಿಗೆ ಹೆಚ್ಚುವರಿ ಸಹಾಯ, ಸಲಹೆ ಒದಗಿಸಲು ಸಹಾಯವಾಣಿ ಸ್ಥಾಪಿಸಲು ಆರ್ಮನ್ ಅನುದಾನವನ್ನು ಬಳಸಿಕೊಳ್ಳಬಹುದಾಗಿದೆ.
ಜನರಿಗೆ ಮಾಹಿತಿ, ಸಾಧನಗಳು, ಸಂಪರ್ಕ ಮತ್ತು ಸುರಕ್ಷತೆಗೆ ಗೂಗಲ್ ಗಮನ ನೀಡಿರುವುದಾಗಿ ಗೂಗಲ್ ಇಂಡಿಯಾ ದೇಶದ ಮುಖ್ಯಸ್ಥ ಹಾಗೂ ಉಪಾಧ್ಯಕ್ಷ ಸಂಜಯ್ ಗುಪ್ತಾ ತಿಳಿಸಿದ್ದಾರೆ. ಭಾರತದ ಆರೋಗ್ಯ ಮೂಲಸೌಕರ್ಯ ಮತ್ತು ಕಾರ್ಯಪಡೆಗಳನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಲಪಡಿಸಲು ಕಂಪನಿಯು ಪ್ರಯತ್ನಿಸುತ್ತಿದೆ ಎಂದು ಅವರು ವರ್ಚುಯಲ್ ಸಭೆಯಲ್ಲಿ ತಿಳಿಸಿದರು.
ಆಕ್ಸಿಜನ್ ಕಾರ್ಯಕ್ರಮ ಕುರಿತಂತೆ ಪಾತ್ ಸಂಸ್ಥೆ ಜೊತೆಗೂಡಿ ಕಾರ್ಯನಿರ್ವಹಿಸುತ್ತೇವೆ. ಆಕ್ಸಿಜನ್ ತಯಾರಿಕಾ ಘಟಕಗಳ ಅಳವಡಿಕೆ, ಸಂಗ್ರಹ ಒಳಗೊಂಡಂತೆ, ಪ್ರಾಜೆಕ್ಟ್ ನಿರ್ವಹಣಾ ಬೆಂಬಲವನ್ನು ನೀಡುವುದಾಗಿ ಗಿವ್ ಇಂಡಿಯಾ ಸಂಸ್ಥೆ ಸಿಇಒ ಅತುಲ್ ಸತಿಜಾ ಹೇಳಿದ್ದಾರೆ.