ಜಿನೀವಾ: ಭಾರತದಲ್ಲಿ 2ನೇ ಅಲೆಯ ಆರ್ಭಟಕ್ಕೆ ಕಾರಣವಾಗಿದ್ದ ಕೊರೋನಾ ವೈರಸ್ ಡೆಲ್ಟಾ ರೂಪಾಂತರಿ ಇದೀಗ ಜಗತ್ತಿನ 85 ದೇಶಗಳಲ್ಲಿ ವ್ಯಾಪಿಸಿದ್ದು, ಪ್ರಬಲ ವಂಶಾವಳಿಯಾಗುವ ಆತಂಕವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಕೊರೊನಾ ಸೋಂಕಿನ ರೂಪಾಂತರ ಡೆಲ್ಟಾ ಅತ್ಯಂತ ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಕೊರೊನಾ ಸೋಂಕಿನ ಇತರ ವೈರಾಣುಗಿಂತ ಅತಿವೇಗವಾಗಿ ಡೆಲ್ಟಾ ರೂಪಾಂತರ ಪ್ರಸರಣ ಹೊಂದಲಿದೆ. ಹೀಗಾಗಿ ಎಚ್ಚರಿಕೆ ವಹಿಸುವ ಅಗತ್ಯವಿದ್ದು, ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮತ್ತು ಉದಾಸೀನ ಮನೋಭಾವ ತೋರಬಾರದು ಎಚ್ಚರಿಕೆ ವಹಿಸಬೇಕು ಎಂದು ವಿಶ್ವ ಆರೋಗ್ಯಸಂಸ್ಥೆ ಜೂನ್ 22 ರಂದು ಬಿಡುಗಡೆ ಮಾಡಿದ ಕೋವಿಡ್-19 ವೀಕ್ಲಿ ಎಪಿಡೆಮಿಯೋಲಾಜಿಕಲ್ ಅಪ್‌ಡೇಟ್‌ನಲ್ಲಿ ಹೇಳಿದೆ.
ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮೈಕ್ ರಿಹಾನ್ ಅವರು, 'ವಿಶ್ವದಲ್ಲಿ ಇದುವರೆಗೂ ಕಾಣಿಸಿಕೊಂಡಿರುವ ಕೊರೋನಾ ಸೋಂಕಿನ ವಿವಿಧ ಮಾದರಿಗಳಲ್ಲಿ ಡೆಲ್ಟಾ ಮಾದರಿ ಅತ್ಯಂತ ವೇಗವಾಗಿ ಹರಡುವ ಗುಣವನ್ನು ಹೊಂದಿದೆ. ಹೀಗಾಗಿ ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮತ್ತು ಉದಾಸೀನ ಮನೋಭಾವ ತೋರಬಾರದು ಮತ್ತು ತೀವ್ರ ಎಚ್ಚರಿಕೆ ವಹಿಸಬೇಕು. ವಿವಿಧ ದೇಶಗಳು ಅದರಲ್ಲೂ ಡೆಲ್ಟಾ ಮಾದರಿಯ ರೂಪಾಂತರ ಕಾಣಿಸಿಕೊಂಡಿರುವ ದೇಶಗಳು ತಮ್ಮ ದೇಶಗಳಲ್ಲಿ ಸೋಂಕು ಹೆಚ್ಚು ಹರಡದಂತೆ ಜಾಗ್ರತೆ ವಹಿಸಬೇಕು ಎಂದು ಕೂಡ ಸಲಹೆ ನೀಡಿದ್ದಾರೆ.
ರೂಪಾಂತರ ಸೋಂಕು ಕಾಣಿಸಿಕೊಂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ಹೀಗಾಗಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಎಚ್ಚರಿಕೆ ವಹಿಸುವ ತುರ್ತು ಅಗತ್ಯವಿದೆ. ಭಾರತ ಸೇರಿದಂತೆ ಜಗತ್ತಿನ 85ಕ್ಕೂ ಅಧಿಕ ದೇಶಗಳಲ್ಲಿ ಡೆಲ್ಟಾ ಮತ್ತು ಡೆಲ್ಟ ಪ್ಲಸ್ ಮಾದರಿಯ ರೂಪಾಂತರ ಸೋಂಕು ಕಾಣಿಸಿಕೊಂಡಿದ್ದು ಜಗತ್ತಿನ ಅನೇಕ ದೇಶಗಳನ್ನು ತತ್ತರಿಸುವಂತೆ ಮಾಡಿದೆ. ಜಗತ್ತಿನ ವಿವಿಧ ದೇಶಗಳಲ್ಲಿ ಈಗಾಗಲೇ ಡೆಲ್ಟಾ ರೂಪಾಂತರಿ ಸೋಂಕಿನ ಎರಡು-ಮೂರನೇ ಅಲೆಗಳು ಕಾಣಿಸಿಕೊಂಡು ಆಯಾ ದೇಶಗಳಲ್ಲಿ ಅನೇಕ ಸಾವು-ನೋವು ಆರ್ಥಿಕ ಹಾನಿ ಸಂಭವಿಸಿರುವ ನಡುವೆ ಡೆಲ್ಟಾ ರೂಪಾಂತರ ಸೋಂಕು ಮತ್ತಷ್ಟು ಹಾನಿ ಉಂಟು ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಜಗತ್ತಿನ 170 ದೇಶಗಳಲ್ಲಿ ಆರ್ಭಟ
ಕೊರೋನಾ ವೈರಸ್ ನಾಲ್ಕು ರೂಪಾಂತರಿ ಸೋಂಕು ಜಗತ್ತಿನ 170 ದೇಶಗಳಲ್ಲಿ ಆರ್ಭಟ ಮುಂದುವರೆಸಿದ್ದು, 119 ದೇಶಗಳಲ್ಲಿ ಬೀಟಾ, 71 ದೇಶಗಳಲ್ಲಿ ಗಾಮಾ ಮತ್ತು 85 ದೇಶಗಳಲ್ಲಿ ಡೆಲ್ಟಾ ವರದಿಯಾಗಿದೆ ಎಂದು ಹೇಳಿದೆ. ಜಾಗತಿಕವಾಗಿ 85 ದೇಶಗಳಲ್ಲಿ ಈಗ ವರದಿಯಾಗಿರುವ ಡೆಲ್ಟಾ ರೂಪಾಂತರ, ಎಲ್ಲಾ ಡಬ್ಲ್ಯುಎಚ್‌ಒ ಪ್ರದೇಶಗಳಲ್ಲಿ ಹೊಸ ದೇಶಗಳಲ್ಲಿ ವರದಿಯಾಗುತ್ತಿದೆ. ಕಳೆದ 2 ವಾರಗಳ ಅವಧಿಯಲ್ಲಿ ಹೊಸದಾಗಿ 11 ದೇಶಗಳಲ್ಲಿ ವರದಿಯಾಗಿದೆ. ಹೀಗಾಗಿ ಈ ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆ 'ವೇರಿಯಂಟ್ಸ್ ಆಫ್ ಕನ್ಸರ್ನ್' ಅಥವಾ ಕಳವಳಕಾರಿ ಎಂದು ಗುರುತಿಸಿದೆ.
ಡೆಲ್ಟಾ ಪ್ರಬಲ ವಂಶಾವಳಿಯಾಗುವ ಆತಂಕ
ಡೆಲ್ಟಾ ರೂಪಾಂತರವು ಆಲ್ಫಾ ರೂಪಾಂತರಕ್ಕಿಂತ ಗಮನಾರ್ಹವಾಗಿ ಹೆಚ್ಚು ಹರಡಬಲ್ಲದು ಮತ್ತು ಪ್ರಸ್ತುತ ಪ್ರವೃತ್ತಿಗಳು ಮುಂದುವರಿದರೆ ಪ್ರಬಲ ವಂಶಾವಳಿಯಾಗುವ ನಿರೀಕ್ಷೆಯಿದೆ. ಜೂನ್ 8 ರಂದು ಕೊನೆಯ ವರದಿಲ್ಲಿ, ಡೆಲ್ಟಾ ರೂಪಾಂತರದ ಫಿನೋಟೈಪಿಕ್ ಗುಣಲಕ್ಷಣಗಳ ಬಗ್ಗೆ ಹೊಸ ಪುರಾವೆಗಳನ್ನು ಪ್ರಕಟಿಸಲಾಗಿದೆ. ಸಿಂಗಾಪುರದ ಅಧ್ಯಯನವು ಡೆಲ್ಟಾ ರೂಪಾಂತರದ ಸೋಂಕು ಹೆಚ್ಚಿನ ಪ್ರಮಾಣದ ಆಕ್ಸಿಜನ್ ಅವಶ್ಯಕತೆ, ತೀವ್ರ ನಿಗಾ ಘಟಕ (ಐಸಿಯು) ಪ್ರವೇಶ ಅಥವಾ ಸಾವುಗಳ ಕುರಿತು ವರದಿ ಮಾಡಿತ್ತು.
ಇದಲ್ಲದೆ, ಜಪಾನ್‌ನಲ್ಲಿನ ಒಂದು ಅಧ್ಯಯನವು ಇತರೆ ರೂಪಾಂತರಗಳಿಗೆ ಹೋಲಿಕೆ ಮಾಡಿದರೆ ಡೆಲ್ಟಾ ರೂಪಾಂತರದ ಸಂತಾನೋತ್ಪತ್ತಿ ಪ್ರಮಾಣ ಹೆಚ್ಚು ಎಂದು ಹೇಳಿತ್ತು. ಡಿಸೆಂಬರ್ 2020 ರ ಮೊದಲು ಜಪಾನ್‌ನಲ್ಲಿ ಚಲಾವಣೆಯಲ್ಲಿರುವ ರೂಪಾಂತರಗಳೊಂದಿಗೆ ಹೋಲಿಸಿದಾಗ, ಆಲ್ಫಾ ರೂಪಾಂತರಿ ಸಂತಾನೋತ್ಪತ್ತಿ ಪ್ರಮಾಣ 1.56ರಷ್ಟಿದ್ದರೆ. ಇದೇ ಪ್ರಮಾಣ ಡೆಲ್ಟಾದಲ್ಲಿ 1.78ರಷ್ಟಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.