ಮಂಗಳೂರು; ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದಲ್ಲಿರುವ ಜನರಲ್ಲಿ ಹೊಸ ಆಶಾವಾದ ಮೂಡಿದೆ. ಕುದುರೆಮುಖದ ತಪ್ಪಲಿನಲ್ಲಿರುವ ಅರಣ್ಯದಂಚಿನ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದ ಜನರು ಈವರೆಗೆ ಎದುರಿಸಿದ್ದ ಸಮಸ್ಯೆ ಈಗ ನಿವಾರಣೆಯಾಗುವ ಸಾಧ್ಯತೆ ಇದೆ.
ಕರ್ನಾಟಕ ಸರ್ಕಾರ ಎಳನೀರು ಪ್ರದೇಶಕ್ಕೆ ಸಂಪರ್ಕಿಸುವ ಎಳನೀರು-ಸಂಸೆ ರಸ್ತೆ ಅಭಿವೃದ್ಧಿಗೊಳಿಸಲು ಚಿಂತನೆ ನಡೆಸಿದೆ. ಎಳನೀರು ಭಾಗದ ಜನರ ಭೂ ದಾಖಲೆಗಳು ಎಲ್ಲವೂ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮ ಪಂಚಾಯತಿಯಲ್ಲಿವೆ.
ಮಲವಂತಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಎಳನೀರು ಪ್ರದೇಶ ಬರುತ್ತದೆ. ಆದರೆ ಜನರು ಗ್ರಾಮ ಪಂಚಾಯತಿಗೆ ಬರುವುದಕ್ಕೆ ಸುಮಾರು 90 ಕಿ. ಮೀ. ಕ್ರಮಿಸಬೇಕಾಗಿತ್ತು. ಎಳನೀರಿನಿಂದ ಸಂಸೆ, ಕಳಸ, ಬಜಗೋಳಿ ಮೂಲಕ ಬೆಳ್ತಂಗಡಿಗೆ ಬಂದು ಮಲವಂತಿಗೆಗೆ ಬರಬೇಕಿತ್ತು.
ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿಗಳಲ್ಲಿ ಕೆಲಸಗಳಿದ್ದರೆ 90 ಕಿ. ಮೀ. ಕ್ರಮಿಸಿ ಬರುವುದು ಬಹಳ ಕಷ್ಟವಾಗುತಿತ್ತು. ಆದರೆ ಇನ್ನು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮುಂದಾಗಿದ್ದಾರೆ.
ಎಳನೀರು-ಸಂಸೆ ರಸ್ತೆ ಅರಣ್ಯ ವ್ಯಾಪ್ತಿಗೆ ಬರುವುದರಿಂದ ಈಗ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಅಧಿಕಾರಿಗಳಿಂದಲೂ ರಸ್ತೆಗೆ ಸರ್ವೆ ಕಾರ್ಯ ನಡೆಸುವ ಬಗ್ಗೆ ಇಂಗಿತ ವ್ಯಕ್ತವಾಗಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಕುಮಾರ್ ಗೋಗಿ ಮತ್ತು ಎಸಿಸಿಎಫ್ ಸುಭಾಷ್. ಕೆ ಮಾಲ್ಕೇಡೆ ಜೊತೆ ಹರೀಶ್ ಪೂಂಜಾ ಮಾತುಕತೆ ನಡೆಸಿದ್ದಾರೆ.
ಈ ರಸ್ತೆ ಅಭಿವೃದ್ಧಿಯಾದರೆ ಸಂಸೆಯಿಂದ ಮಲವಂತಿಗೆ ಗ್ರಾಮ ತಲುಪಲು ಕೇವಲ 8 ಕಿ. ಮೀ. ಸಂಚಾರ ನಡೆಸಬಹುದು. ಜನರು 90 ಕಿ. ಮೀ. ಅಲೆಯುವುದು ತಪ್ಪಲಿದೆ.