ನವದೆಹಲಿ: ಆಧುನಿಕ ಯುಗದಲ್ಲಿ ಕಂಪ್ಯೂಟರ್ ಎಲ್ಲ ಕ್ಷೇತ್ರಗಳಿಗೆ ಕಾಲಿಟ್ಟಿದೆ. ಇದೀಗ ಇದೇ ಕಂಪ್ಯೂಟರ್ ನಲ್ಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ತಮ್ಮ ವಿನೂತನ ಕೌಶಲ್ಯದ ಮೂಲಕ 9 ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಕೈಗಳಿಂದ ಟೈಪ್ ಮಾಡುತ್ತಾರೆ. ಆದರೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿನೋದ್ ಕುಮಾರ್ ಚೌದರಿ ಅವರು ಮೂಗಿನ ಸಹಾಯದಿಂದ ಟೈಪಿಂಗ್ ಮಾಡುತ್ತಾರೆ. ತಮ್ಮ ಈ ವಿನೂತನ ಶೈಲಿಯ ಟೈಪಿಂಗ್ ಮುಖಾಂತರವೇ ಅವರು ಬರೊಬ್ಬರಿ 9 ಗಿನ್ನೆಸ್ ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜವಹರ್ಲಾಲ್ ನೆಹರು ವಿಶ್ವ ವಿದ್ಯಾಲಯದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿರುವ 41 ವರ್ಷದ ವಿನೋದ್ ಕುಮಾರ್ ಚೌಧರಿ 2014ರಲ್ಲಿ ಮೂಗಿನಲ್ಲಿ ಅತಿ ವೇಗದಲ್ಲಿ ಕಣ್ಮುಚ್ಚಿಕೊಂಡು ಟೈಪ್ ಮಾಡಿ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ. ಅಲ್ಲದೆ ಬಾಯಿಯಲ್ಲಿ ಕೋಲು ಹಿಡಿದು ಟೈಪಿಂಗ್ ಮಾಡುವುದು, ಕಣ್ಮುಚ್ಚಿಕೊಂಡು ಟೈಪಿಂಗ್ ಮಾಡುವುದು ಜತೆಗೆ ವೇಗವಾಗಿ ಟೈಪಿಂಗ್ ಮಾಡುವುದರ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಇದರ ಜತೆಗೆ ತನ್ನ ವಿಶಿಷ್ಟ ಕಲೆಯನ್ನು ಬಡ ಮಕ್ಕಳಿಗೆ ಹಾಗೂ ಅಂಗವಿಕಲ ಮಕ್ಕಳಿಗೆ ಮನೆಯಲ್ಲಿಯೇ ಪಾಠ ಮಾಡುತ್ತಿದ್ದಾರೆ. ತಮ್ಮ ಸಾಧನೆಯ ಮೂಲಕ ಗಿನ್ನಿಸ್ ದಾಖಲೆ ಸೃಷ್ಟಿಸಿ ಜನಪ್ರಿಯತೆ ಪಡೆದಿದ್ದಾರೆ.
ತಮ್ಮ ವಿಶಿಷ್ಟ ಕೌಶಲ್ಯದ ಬಗ್ಗೆ ಮಾತನಾಡಿರುವ ವಿನೋದ್ ಕುಮಾರ್ ಚೌಧರಿ, 'ಬಾಲ್ಯದಲ್ಲಿರುವಾಗ ನನಗೆ ಕ್ರೀಡೆಯ ಬಗ್ಗೆ ತುಂಬಾ ಆಸಕ್ತಿ ಇತ್ತು. ಆದರೆ ನಾನು ದೊಡ್ಡವನಾಗುತ್ತಿದ್ದಂತೆಯೇ ನನ್ನ ಆರೋಗ್ಯ ಸಮಸ್ಯೆಯಿಂದಾಗಿ ಕ್ರೀಡೆಗಳನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆ ಬಳಿಕ, 2014ರ ಸಮಯದಲ್ಲಿ ನನ್ನ ಮೂಗಿನ ಸಹಾಯದಿಂದ 46.30 ಸೆಕೆಂಡುಗಳಲ್ಲಿ 103 ಅಕ್ಷರಗಳನ್ನು ಟೈಪ್ ಮಾಡುವ ಮೂಲಕ ಮೊದಲ ದಾಖಲೆಯನ್ನು ಸೃಷ್ಟಿಸಿದೆ. ಇದುವರೆಗೆ, ಟೈಪಿಂಗ್ ಮಾಡಲು ತೆಗೆದುಕೊಂಡ ಕಡಿಮೆ ಸಮಯ ಇದಾಗಿತ್ತು. ಈ ಸಾಧನೆಯ ಸಾಕ್ಷಿಯಾಗಿ ಗಿನ್ನೆಸ್ ವಿಶ್ವದಾಖಲೆ ಪ್ರಮಾಣ ಪತ್ರವನ್ನು ಸ್ವೀಕರಿಸಿದೆ. ಇದು ನನ್ನ ಉತ್ಸುಕತೆಯನ್ನು ಹೆಚ್ಚಿಸಿತು. ಆ ಬಳಿಕ ಇನ್ನೂ ಹೆಚ್ಚಿನ ಅಭ್ಯಾಸವನ್ನು ಮಾಡಲು ಪ್ರಾರಂಭಿಸಿದೆ. 2016ರಲ್ಲಿ ನಾನು ಎರಡು ಹೊಸ ದಾಖಲೆಗಳನ್ನು ಮಾಡಿದೆ. 2016ರಲ್ಲಿ ಕಣ್ಣಿಗೆ ಪಟ್ಟಿಕಟ್ಟಿಕೊಂಡು 6.09 ಸೆಕೆಂಡುಗಳಲ್ಲಿ ಎಲ್ಲಾ ವರ್ಣಾಕ್ಷರಗಳನ್ನು ಅತಿ ವೇಗದಲ್ಲಿ ಟೈಪ್ ಮಾಡಿ ದಾಖಲೆ ಬರೆದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.
ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಚೌಧರಿ, 2017 ರಲ್ಲಿ ಬಾಯಿಯಲ್ಲಿ ಕೋಲು ಹಿಡಿದು ಎಲ್ಲಾ ಅಕ್ಷರಗಳನ್ನು 18.65 ಸೆಕೆಂಡುಗಳಲ್ಲಿ ಟೈಪ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಇದೇ ಸಾಧನೆಯನ್ನು 17.69 ಸೆಕೆಂಡುಗಳಲ್ಲಿ ಮತ್ತು ನಂತರ 2019 ರಲ್ಲಿ 17.01 ಸೆಕೆಂಡುಗಳಲ್ಲಿ ಸಾಧಿಸುವ ಮೂಲಕ ಅವರು 2018 ರಲ್ಲಿ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. 2019 ರಲ್ಲಿ, ಚೌಧರಿ ಒಂದು ಬೆರಳಿನಿಂದ ವೇಗವಾಗಿ ಟೈಪ್ ಮಾಡಿ ಅಂದರೆ ಎಲ್ಲಾ ವರ್ಣಮಾಲೆಗಳನ್ನು ಕೇವಲ 29.53 ಸೆಕೆಂಡುಗಳಲ್ಲಿ ಟೈಪ್ ಮಾಡಿ ಗಿನ್ನೆಸ್ ಪುಸ್ತಕದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದರು.
ಸಚಿನ್ ಸ್ಪೂರ್ತಿ
ಅಂತೆಯೇ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಂತೆ ಗಿನ್ನಿಸ್ ಪುಸ್ತಕದಲ್ಲಿ 19 ದಾಖಲೆಗಳನ್ನು ಸೃಷ್ಟಿಸುವ ಆಸೆ ಹೊಂದಿದ್ದೇನೆ. ಇದಕ್ಕಾಗಿ ನಾನು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇನೆ ಮತ್ತು ಯಾವಾಗಲೂ ಅಭ್ಯಾಸದಲ್ಲಿ ತೊಡಗಿರುತ್ತೇನೆ. ಯಾವುದೇ ಮೂಲಸೌಕರ್ಯಗಳನ್ನು ಹೊಂದಿರದ ಹಾಗೂ ಅಗತ್ಯವಿರುವವರಿಗೆ ಉಚಿತವಾಗಿ ತರಬೇತಿಯನ್ನು ನೀಡುವ ಕಂಪ್ಯೂಟರ್ ಸಂಸ್ಥೆಯನ್ನು ನಡೆಸಲು ನಾನು ಬಯಸುತ್ತೇನೆ. ಇದೀಗ ನನ್ನ ಆರ್ಥಿಕ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಅಭ್ಯಾಸ ಹೇಳಿಕೊಡುತ್ತಿದ್ದೇನೆ. ವಿದ್ಯಾರ್ಥಿಗಳು ಅಭ್ಯಾಸ ಮಾಡಬಹುದಾದ ಕೆಲವು ಕಂಪ್ಯೂಟರ್ಗಳು ನನ್ನಲ್ಲಿವೆ ಎಂದು ದೆಹಲಿಯ ನಂಗ್ಲೋಯಿ ನಿವಾಸಿ ಚೌದರಿ ಹೇಳಿದ್ದಾರೆ.
ಟೆನ್ನಿಸ್ ಚೆಂಡಿನ ದಾಖಲೆ
ಅಂತೆಯೇ ವಿನೋದ್ ಕುಮಾರ್ ಚೌದರಿ ಮತ್ತೊಂದು ದಾಖಲೆ ಕೂಡ ನಿರ್ಮಿಸಿದ್ದು, ಅವರೇ ಹೇಳಿಕೊಂಡಿರುವಂತೆ ಒಂದು ನಿಮಿಷದೊಳಗೆ ಟೆನಿಸ್ ಚೆಂಡನ್ನು 205 ಬಾರಿ ಮುಟ್ಟಿರುವ ಕುರಿತು ದಾಖಲೆ ನಿರ್ಮಾಣ ಮಾಡಿದ್ದಾರೆ. ಗಿನ್ನೆಸ್ ಪುಸ್ತಕದಲ್ಲಿ ಇದು ಹೊಸ ದಾಖಲೆ ಎಂದು ಚೌದರಿ ಹೇಳಿದ್ದಾರೆ.